ಸುದ್ದಿವಿಜಯ, ಜಗಳೂರು: ನಾಡಿನ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳ ಅಭಿವೃದ್ಧಿಗೆ ಶ್ರಮಿಸಿದ ಸಿರಿಗೆರೆಯ ತರಳಬಾಳು ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ 31ನೇ ಶ್ರದ್ಧಾಂಜಲಿ ಸಮಾರಂಭ ಸೆ.20 ರಿಂದ 24ರವರೆಗೆ ನಡೆಯಲಿದ್ದು ತಾಲೂಕಿನ ಬಿದರಕೆರೆ ತರಳಬಾಳು ರೈತ ಉತ್ಪಾದಕ ಕಂಪನಿ ಅಡಿ ಬರುವ ಗ್ರಾಮಗಳ ರೈತರು ಶ್ರೀಮಠಕ್ಕೆ ಭಕ್ತಿ ಸಮರ್ಪಸಿದರು.
ಬಿದರಕೆರೆ ಎಫ್‍ಪಿಒ ಗುಚ್ಛ ಗ್ರಾಮಗಳ ಆಡಿ ಬರುವ ಬಿದರಕೆರೆ, ಅರಿಶಿಣಗುಂಡಿ, ಜಮ್ಮಾಪುರ, ಕಟ್ಟಿಗೆಹಳ್ಳಿ, ರಸ್ತೆಮಾಕುಂಟೆ, ಬಿಸ್ತುವಳ್ಳಿ, ಗುತ್ತಿದುರ್ಗ, ಮೆದಗಿನಕೆರೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳ ರೈತರು ತಾವು ಬೆಳೆದ ಕುಂಬಳಕಾಯಿ, ಟೊಮೆಟೊ, ಅಕ್ಕಿ, ರಾಗಿ, ಗೋಧಿ, ಜೋಳ, ತೆಂಗಿನಕಾಯಿ ಸೇರಿದಂತೆ ಅನೇಕ ದವಸ ಧಾನ್ಯಗಳನ್ನು ಮಂಗಳವಾರ & ಬುಧವಾರ ಅರ್ಪಿಸಿದರು.ಸಿರಿಗೆರೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಭಕ್ತರು ಭಾಗವಹಿಸಲಿದ್ದಾರೆ. ಗುರುಶಾಂತೇಶ್ವರ ದಾಸೋಹ ಭವನಕ್ಕೆ ಹೊಂದಿಕೊಂಡಿರುವ ಸಭಾ ಮಂಟಪದ ಪಕ್ಕದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದು ಪ್ರಸಾದ ವ್ಯವಸ್ಥೆಗೆ ಬಿದರಕೆರೆ ಅಮೃತ ರೈತ ಉತ್ಪಾದಕ ಕಂಪನಿ ಅಳಿಲು ಸೇವೆ ಮಾಡಲು ಮುಂದಾಗಿದೆ. FPO ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನು ಭಕ್ತರು ಸಮರ್ಪಿಸಿದರುಎಂದು ಅಧ್ಯಕ್ಷ ಎಚ್.ಎಂ.ಮಂಜುನಾಥ್ ತಿಳಿಸಿದರು.
ರೈತರು ಸಾಕಷ್ಟು ದವಸ ಧಾನ್ಯಗಳನ್ನು ದಾಸೋಹಕ್ಕೆ ನೀಡಿದ್ದು ಹತ್ತು ಕ್ವಿಂಟಾಲ್ ಅಕ್ಕಿ, 1 ಟನ್ ಕುಂಬಳ, 1 ಕ್ವಿಂಟಾಲ್ ರಾಗಿ, ವಿವಿಧ ತರಕಾರಿಗಳನ್ನು ಶ್ರೀ ಮಠಕ್ಕೆ ಅರ್ಪಿಸಿದ್ದೇವೆ ಎಂದು ತಿಳಿಸಿದರು.