ಸುದ್ದಿವಿಜಯ, ಜಗಳೂರು: ಕಾಡುಗೊಲ್ಲ ಜಾತಿ ಪ್ರಮಾಣಪತ್ರ ನೀಡುವಂತೆ ಹಾಗೂ ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕುರಿ, ಮೇಕೆ, ಎಮ್ಮೆ, ಹಸುಗಳು, ವಿವಿಧ ಗ್ರಾಮೀಣ ಕಲಾ ತಂಡಗಳಾದ ಕೋಲಾಟ, ಯಕ್ಷಗಾನ, ಭಜನೆ, ಸೋಬಾನ ಹಾಗೂ ಕಾಡುಗೊಲ್ಲ ಸಮುದಾಯದ ವಿದ್ಯಾರ್ಥಿಗಳ ಘೋಷಣೆಗಳು ಎಲ್ಲರ ಗಮನ ಸೆಳೆಯಿತು.
ಹಳೆ ಮಹಾತ್ಮಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಬಿದರಕೆರೆ ರಸ್ತೆ ಮಾರ್ಗದುದ್ದಕ್ಕೂ ಯುವಕರು ಕುಣಿಯುತ್ತಾ ತಾಲೂಕು ಕಚೇರಿಗೆ ತೆರಳಿದರು. ಬೆಳಗ್ಗೆ 11.30 ರಿಂದ ತಾಲೂಕು ಕಚೇರಿಯ ಆವರಣದಲ್ಲಿ ಧರಣಿ ಕುಳತ ಪ್ರತಿಭಟನಾಕಾರರು ಸಂಜೆ 4ಗಂಟೆಗೆ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಕಾಡುಗೊಲ್ಲ ಯುವ ಸೇನೆ ಜಿಲ್ಲಾಧ್ಯಕ್ಷ ಎಚ್.ಎಂ ಹೊಳೆ ಮಹಾಲಿಂಗಪ್ಪ ಮಾತನಾಡಿ, ರಾಜ್ಯದಲ್ಲಿ 12 ಜಿಲ್ಲೆ, 40 ತಾಲೂಕುಗಳಲ್ಲಿ ಕಾಡುಗೊಲ್ಲರು ಸುಮಾರು 14 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
ಇಂದಿಗೂ ಕೂಡ ತಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ನಿರಂತರವಾಗಿ ಪ್ರಯತ್ನ ನಡೆಸಿದರೂ ಸಹ ಈವರೆಗೂ ರಾಜ್ಯದಲ್ಲಿ 84 ಮಾತ್ರ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಿದೆ.
ಆದರೆ ರಾಜ್ಯ ಸರ್ಕಾರ ಕಾಡುಗೊಲ್ಲರಹಟ್ಟಿಗಳನ್ನು ಗುರುತಿಸಿ ಸಾಮಾಜಿಕ, ಸಾಂಸ್ಕೃತಿಕ ಜೀವನವನ್ನು ಅಧ್ಯಾಯನ ಮಾಡಿ ಸ್ಥಳ ಪರಿಶೀಲಿಸಿ ಪಂಚನಾಮೆ ಮಾಡಿ ಕಾಡುಗೊಲ್ಲರಿಗೆ ಪ್ರವರ್ಗ 1ರಲ್ಲಿ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ನೀಡಲು ಅಗತ್ಯಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರೂ ಪಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿ ಕಾಡುಗೊಲ್ಲರೆ ಇಲ್ಲ, ಇರುವುದೆಲ್ಲಾ ಬರಿ ಗೊಲ್ಲರೆ ಎಂದು ಸುಳ್ಳು ಮಾಹಿತಿ ನೀಡಿ ಅಧಿಕಾರಿ ಮತ್ತು ಸರ್ಕಾರವನ್ನು ದಾರಿ ತಪ್ಪಿಸುತ್ತಿರುವುದು ದುರಂತವಾಗಿದೆ ಎಂದರು.ಮುಖಂಡ ತಿಪ್ಪೇಸ್ವಾಮಿಗೌಡ ಮಾತನಾಡಿ, ಇಂದಿಗೂ ಕಾಡುಗೊಲ್ಲರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರು ತನ್ನದೇ ಜಾತಿ ಪ್ರಮಾಣ ಪತ್ರ ಪಡೆಯಲು ಹೋರಾಟ ಮಾಡಲಾಗುತ್ತಿದೆ.
ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಟ್ಟು ಕಾಡುಗೊಲ್ಲ ಜಾತಿ ಪ್ರಮಾಣ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸುಂಕಪ್ಪ, ತಾಲೂಕಾಧ್ಯಕ್ಷ ಹೊನ್ನಮರಡಿ ಕೃಷ್ಣಮೂರ್ತಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಕಾಡುಗೊಲ್ಲ ಯುವ ಸೇನೆ ತಾಲೂಕಾಧ್ಯಕ್ಷ ಜಿ.ಆರ್ ಇಂದ್ರೇಶ್, ಕಾರ್ಯದರ್ಶಿ ಮಾಕುಂಟೆ ಪ್ರಕಾಶ್ ಇದ್ದರು.