ಸುದ್ದಿವಿಜಯ, ಜಗಳೂರು: ತಾಲೂಕಿನ ಅನೇಕ ರೈತರಿಗೆ ಕಳೆದ ವರ್ಷ ಖರೀದಿಸಿರುವ ರಾಗಿ ಬೆಂಬಲ ಬೆಲೆ ಹಣ ಇನ್ನೂ ಸಂದಾಯವಾಗಿಲ್ಲ. ಹಣ ಜಮೆ ಆಗುವವರೆಗೂ ಬೆಂಬಲ ಬೆಲೆ ಯೋಜನೆ ಅಡಿ ಈ ವರ್ಷ ರಾಗಿ ಖರೀದಿಗೆ ಅವಕಾಶ ಕೊಡುವುದಿಲ್ಲ ಎಂದು ರೈತರು ಗುರುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಟ್ಟು ಹಿಡಿದು ಕುಳಿತಿದ್ದರು.
2023-24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟನೆ ವೇಳೆ ಧರಣಿ ಕುಳಿತ ರೈತರನ್ನು ಶಾಸಕ ಬಿ.ದೇವೇಂದ್ರಪ್ಪ ಸಮಾಧಾನ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾದರು.
ಈ ವೇಳೆ ಮಾತನಾಡಿದ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ನಾನು ಆಹಾರ ಸಚಿವ ಮುನಿಯಪ್ಪ ಮತ್ತು ಆಹಾರ ಇಲಾಖೆ ಎಂಡಿ ಜೊತೆಯೂ ಮಾತನಾಡಿದ್ದೇನೆ. ನಿಮ್ಮ ಹಣ ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
1ನೇ ಹಂತದ 489 ಜನ ರೈತರಲ್ಲಿ 402 ರೈತರಿಗೆ ಹಣ ಪಾವತಿಯಾಗಿದೆ. 9 ರೈತರ ಬ್ಯಾಂಕ್ ವಿವರ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ 71 ರೈತರ ದಾಖಲೆಗಳನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದರು.
2ನೇ ಹಂತದಲ್ಲಿರುವ 284 ಜನರಲ್ಲಿ 138 ರೈತರ ದಾಖಲಾತಿಗಳು ಸ್ವೀಕೃತವಾಗಿದ್ದು ದಾಖಲೆಗಳನ್ನು ಡಿಡಿ ಕಚೇರಿಗೆ ಕಳುಹಿಸಲಾಗಿದೆ. ಅದರಲ್ಲಿ 146 ದಾಖಲೆಗಳು ಇನ್ನೂ ಬಂದಿಲ್ಲ ಎಂದು ರೈತರಿಗೆ ಮಾಹಿತಿ ನೀಡಿದರು.ಜಗಳೂರು ಎಪಿಎಂಸಿಯಲ್ಲಿ ಬೆಂಬಲ ಬೆಲೆ ಅಡಿ ಖರೀದಿಸಿದ ರಾಗಿ ಹಣ ರೈತರಿಗೆ ಪಾವತಿ ಆಗದ ಕಾರಣ ಧರಣಿ ಕುಳಿತಿದ್ದ ರೈತರನ್ನು ಶಾಸಕರು ಮನವೊಲಿಸಿದರು.
3ನೇ ಹಂತದಲ್ಲಿ 269 ರಲ್ಲಿ 135 ದಾಖಲೆಗಳು ಬಂದಿಲ್ಲ. 82 ರೈತರು ಹೊರ ತಾಲೂಕು, ಜಿಲ್ಲೆಗಳ ರೈತರಾಗಿದ್ದು ನೋಟಿಸ್ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕಿದೆ. 37 ರೈತರ ರಾಗಿ ದಾಸ್ತಾನು ಇದೆ. ಅಷ್ಟೇ ಅಲ್ಲ ಹಣ ಸಹ ಪಾವತಿಯಾಗಬೇಕಿದೆ. 27 ರೈತರ ಆಧಾರ್ ಜೋಡಣೆ ಕಾರಣ ಬಾಕಿ ಇದೆ.
ಹೀಗಾಗಿ ದಾಖಲೆ ಸರಿ ಇರುವ 37 ರೈತರಿಗೆ 10 ದಿನಗಳ ಒಳಗಾಗಿ ಅವರ ಅಕೌಂಟ್‍ಗೆ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳಿಂದ ರೈತರಿಗೆ ಭರವಸೆ ಕೊಡಿಸಿದರು.
ಪ್ರಸ್ತುತ ವರ್ಷ ಬರಗಾಲ ಆವರಿಸಿದ್ದು ರೈತರು ಅಷ್ಟಾಗಿ ರಾಗಿ ಬೆಳೆದಿಲ್ಲ. ಅನ್ ಲಿಮಿಟೆಡ್ ರಾಗಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಅವ್ಯವಹಾರ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದೇನೆ.
ನಾನೂ ಸಹ ಆಗಾಗ ಎಪಿಎಂಸಿಗೆ ಬಂದು ಗಮನ ಹರಿಸುತ್ತಿರುತ್ತೇನೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಯಾರೊ ಮಾಡಿದ ತಪ್ಪಿಗೆ ರೈತರು ಪರಿತಪಿಸುವಂತಾಗಿದೆ. ಅನ್ನ ಕೊಡುವ ರೈತನಿಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಭರವಸೆ ನಂತರ ರಾಗಿ ಖರೀದಿ ಕೇಂದ್ರ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಡಿಡಿ ಸಿದ್ದರಾಮ ಮಾರಿಹಾಳ, ತಾಲೂಕು ಆಹಾರ ಅಧಿಕಾರಿ ಶಿವಪ್ರಕಾಶ್, ಎಪಿಎಂಸಿ ಮ್ಯಾನೇಜರ್ ಮನೋಜ್, ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ,
ಪಡಿತರ ಮಾಲೀಕರ ಸಂಘದ ಅಧ್ಯಕ್ಷ ಓಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಅನೇಕರು ಇದ್ದರು.