ಸುದ್ದಿವಿಜಯ, ಜಗಳೂರು: ಕೋಮು ಪ್ರಚೋದನೆ ಮಾತುಗಳನ್ನಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ದ ಸುಮೊಟೋ ಪ್ರಕರಣ ದಾಖಲಿಸಿ, ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾಗೆ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟದ ಗಂಜಾಂ ನಗರದಲ್ಲಿರುವ ನಿಮಿಷಾಂಬ ದೇವಸ್ಥಾನದಲ್ಲಿ ಡಿ.24ರಂದು ನಡೆದ ಮಾಲಾಧಾರಿಗಳ ಸಂಕೀರ್ತನ ಯಾತ್ರೆಗೆ ಚಾಲನೆ ನೀಡಿ ಮಾತನಾಡುವ ವೇಳೆ ಕಲ್ಲಡ್ಕ ಪ್ರಭಾಕರ್ ಕಲ್ಲಡ್ಕ ಪ್ರಭಾಕರ್ ಭಟ್ಟರು ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿರುವುದಲ್ಲದೆ ಅಲ್ಲಾಹು ಅಕ್ಬರ್ ಎಂದು ಹೇಳಲು ಮುಸ್ಲಿಮರು ಅವರವರ ಮನೆ, ಮಸೀದಿಗಳಲ್ಲಿ ಮಾತ್ರ ಹೇಳಬೇಕು, ಇನ್ನುಳಿದಲ್ಲೆಲ್ಲ ರಾಮ ನಾಮ ಹೇಳಬೇಕು ಎಂದು ಕಟ್ಟಪ್ಪಣೆ ನೀಡಿದ್ದಾರೆ.
ಸರ್ವಧರ್ಮಗಳ ನಾಡು, ಜ್ಯಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕವಾಗಿ ಪ್ರತಿ ಧರ್ಮದವರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಹೀಗಿರುವಾಗ ಕಲ್ಲಡ್ಕ ಪ್ರಭಾಕರ್ ಭಟ್ಟರು ಧರ್ಮ ವಿರೋಧಿ ಮಾತುಗಳನ್ನಾಡಿರುವುದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡುವಂತಿದೆ.ಜಗಳೂರಿನಲ್ಲಿ ಬುಧವಾರ ಕೋಮು ಪ್ರಚೋದನೆ ಮಾತುಗಳನ್ನಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ದ ಸುಮೊಟೋ ಪ್ರಕರಣ ದಾಖಲಿಸಿ, ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ದಸಂಸ ವತಿಯಿಂದ ತಹಸೀಲ್ದಾರ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಕೋಮು ಪ್ರಚೋದನೆಯಾಗಿ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಹೋರಾಟಗಾರರು ಖಂಡಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ಟರ್ ಭಾಗಿಯಾಗುವ ಕಾರ್ಯಕ್ರಮಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಹಿಂದು, ಮುಸ್ಲಿಂ, ಕ್ರೈಸ್ತರ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ. ಸುಮಾರು 75 ವರ್ಷಗಳಿಂದಲೂ ದೇಶದಲ್ಲಿ ಎಲ್ಲಾ ಧರ್ಮಿಯರು ನಾವೆಲ್ಲ ಒಂದೂ ಎಂದಿದ್ದಾರೆ.
ಆದರೆ ಇವರು ಮಾತ್ರ ನಾವೇ ಬೇರೆ ಎಂದು ಬೇಧ ಭಾವ ಮಾಡಲು ಹೊರಟಿದ್ದಾರೆ. ಇಂತವರಿಂದ ದೇಶ ಆದೋಗತಿಗೆ ಹೋಗುತ್ತದೆ. ಕೂಡಲೇ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಅಸಗೋಡು ಶಿವಕುಮಾರ್, ದಸಂಸ ತಾಲೂಕು ಸಂಘಟನಾ ಸಂಚಾಲಕ ಸ್ವಾಮಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹೇಮರೆಡ್ಡಿ, ಮುಖಂಡ ಗೌರಿಪುರ ಸತ್ಯಮೂರ್ತಿ ಸೇರಿದಂತೆ ಮತ್ತಿತರಿದ್ದರು.