ಸುದ್ದಿವಿಜಯ,ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶಾಲಾ, ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಪೆಡ್ಲರ್ಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ವೇಷ ಬದಲಿಸಿ ಮಾರಾಟ ಮಾಡುವುದೇ ಇವರ ಕಾಯಕ.
ಅದರಲ್ಲೂ ಅಲೆಮಾರಿಗಳ ಸೋಗಿನಲ್ಲಿ ಹ್ಯಾಶಿಶ್ ಆಯಿಲ್ ಹಾಗೂ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಎಡೆಮುರಿಕಟ್ಟಿದ್ದಾರೆ ಪೊಲೀಸರು. ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಿದ್ದರಾಗಿದ್ದ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದು, ಬರೊಬ್ಬರಿ 4 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
.ಬೆಂಗಳೂರಿನ ಪ್ರತಿಷ್ಠಿತ ಪಬ್ಗಳಲ್ಲಿ ಡಿ.ಜೆಯಾಗಿ ಕೆಲಸ ಮಾಡುತ್ತಿದ್ದ ಜೂಡ್ ಹ್ಯಾರೀಸ್, ಶ್ರೀನಿವಾಸ್, ವಂತಲಾ ಪ್ರಹ್ಲಾದ್, ಮಲ್ಲೇಶ್ವರಿ, ಸತ್ಯವತಿ ಬಂಧಿತರು. ಜೂಡ್ ಹ್ಯಾರೀಸ್ ಪ್ರಕರಣದ ಸೂತ್ರಧಾರ ಎನ್ನಲಾಗಿದೆ.
ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಆರೋಪಿಗಳು, ಆಂಧ್ರಪ್ರದೇಶದ ವಿಶಾಖಪಟ್ಟಣದ ಅರಕು ಹಾಗೂ ಸೆಂಥಿಪಲ್ಲಿ ಅರಣ್ಯಕ್ಕೆ ನುಗ್ಗಿ ಅಲ್ಲಿ ಗಾಂಜಾ ಬೆಳೆದು ಹ್ಯಾಶಿಶ್ ಆಯಿಲ್ ತಯಾರಿಸುತ್ತಿದ್ದರು. ಅದನ್ನು ಕೊಚ್ಚಿ, ಚೆನ್ನೈ, ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರದ ಗ್ರಾಹಕರಿಗೆ ಪೂರೈಸುತ್ತಿದ್ದರು. ಪ್ರಕರಣದ ಯಾವುದೇ ಕುರುಹು ಸಿಗದಂತೆ ತಂತ್ರ ರೂಪಿಸಿದ್ದರು. ಯಾರೂ ಮೊಬೈಲ್ ಹಾಗೂ ಗುರುತಿನ ಚೀಟಿ ಬಳಸುತ್ತಿರಲಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ಆರಂಭದಲ್ಲಿ ಡಿ.ಜೆ ಜೂಡ್ನನ್ನು ಬಂಧಿಸಲಾಗಿತ್ತು. ಜೂಡ್ ಬಾಯ್ಬಿಟ್ಟ ಮಾಹಿತಿ ಆಧರಿಸಿ ಉಳಿದ ನಾಲ್ವರನ್ನು ಬಂಧಿಸಲಾಯಿತು 4 ಕೋಟಿ ಮೌಲ್ಯದ 5 ಕೆ.ಜಿ ಹ್ಯಾಶಿಶ್ ಆಯಿಲ್, 6 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.