ಸುದ್ದಿವಿಜಯ,ಬೆಂಗಳೂರು: ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ್ ಬೊಮ್ಮಾಯಿಗೆ ಬೆಂಬಲ ಸೂಚಿಸಿದ್ದಾರೆ.
ನಾನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಹೋಟೆಲ್ ಅಶೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೀತಿಯ ವ್ಯಕ್ತಿಯ ಪರವಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಲು ಬಂದಿದ್ದೇನೆ. ಸಿನಿಮಾಗೆ ಎಂಟ್ರಿ ಕೊಟ್ಟಾಗ ಯಾರೂ ಗಾಡ್ ಫಾದರ್ ಇರಲಿಲ್ಲ. ನಾನು ಸಿನಿಮಾ ಎಂಟ್ರಿ ಕೊಟ್ಟಾಗ ಬೊಮ್ಮಾಯಿ ರಾಜಕೀಯಕ್ಕೆ ಬಂದರು. ಆ ವ್ಯಕ್ತಿ ಪರವಾಗಿ ನಾನು ಬೆಂಬಲ ಕೊಡುತ್ತೇನೆ ಎಂದು ಹೇಳಿದರು.
ಇಲ್ಲಿ ರಾಜಕೀಯ ಬರುವುದಿಲ್ಲ, ಕಷ್ಟದ ದಿನಗಳಲ್ಲಿ ನಿಂತ ಕೆಲವರ ಪೈಕಿ ಬಸವರಾಜ ಬೊಮ್ಮಾಯಿ ಅವರು ಒಬ್ಬರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅದಲ್ಲದೇ, ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗಲ್ಲ. ಇಂತವರಿಗೆ ಬೆಂಬಲ ಕೊಡಿ ಎಂದು ಹೇಳಿದರೆ ನಾನು ಕೊಡುತ್ತೇನೆ. ಬೇರೆ ಪಕ್ಷದವರು ನನ್ನ ಕಷ್ಟ ಸುಖಕ್ಕೆ ಬಂದಿದ್ದರೆ ನಾನು ಪ್ರಚಾರ ಮಾಡುತ್ತಿದ್ದೆ. ಎಲ್ಲರನ್ನು ಮೆಚ್ವಿಸುವ ಉದ್ದೇಶವಿದ್ದರೆ ಇಲ್ಲಿ ಬರುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿ ಇದ್ದರೂ ಅವರ ಪರವಾಗಿ ನಿಲ್ಲುತ್ತಿದ್ದೆ. ನನ್ನ ಕಷ್ಟದ ದಿನಗಳಲ್ಲಿ ಯಾರಾದರೂ ನನ್ನ ಪರವಾಗಿ ನಿಂತಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯವಾಗಿದೆ. ಕಿಚ್ಚ ಸುದೀಪ್ ಜೊತೆಗೆ ಆತ್ಮೀಯ ಸ್ನೇಹವಿದೆ. ಅವರು ತಮ್ಮ ನಿಲುವನ್ನು ಪ್ರಕಟ ಮಾಡುತ್ತಾರೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಸುದೀಪ್ ರಾಜಕಾರಣದಲ್ಲಿ ಇಲ್ಲ, ಎಲ್ಲರಿಗೂ ಬೇಕಾದವರು ಆಗಿದ್ದಾರೆ ಎಂದರು.