ಸುದ್ದಿವಿಜಯ, ಚನ್ನಗಿರಿ: ಹುಟ್ಟಿದ ಮನುಷ್ಯನಿಗೆ ಸ್ವರ್ಗ ಪ್ರಾಪ್ತಿಯಾಗಬೇಕಾದರೆ ಶಿವಾನುಭವದಲ್ಲಿ ತಲ್ಲೀನರಾದರೆ ಮಾತ್ರ ಸಾಧ್ಯ. ಪಾಪದ ಕೆಲಸ ಮಾಡುವ ಬದಲು ಪುಣ್ಯದ ಕೆಲಸ ಮಾಡಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿರುವ ವಿರಕ್ತಮಠದಲ್ಲಿ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಶ್ರೀಮಠದ ವತಿಯಿಂದ ಆಯೋಜಿಸಿದ್ದ 830ನೇ ಶಿವಾನುಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಕುರಿತು ಮಾತನಾಡಿದ್ದೆ. ಪ್ರಸ್ತುತ 849ನೇ ಶಿವಾನುಭವದ ಬೋಧಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಜನರಿಗೆ ಸೊತ್ತು (ಆಸ್ತಿ) ಬೇಕು ಆದರೆ ಪುರುಸೊತ್ತು ಇಲ್ಲವಾಗಿದೆ. ಇಂತಹ ಲೌಕಿಕ ಜೀವನದ ಮಧ್ಯೆ ಆಧ್ಯಾದ್ಮಿಕ ಜೀವನ ಇಲ್ಲವಾದರೆ ಮನುಷ್ಯ ಜೀವನ ಸಾರ್ಥಕವಾಗಲಾರದು. ಹುಟ್ಟಿದ ಮನುಷ್ಯನಿಗೆ ಮೋಕ್ಷ ಪ್ರಾಪ್ತಿಯಾಗಬೇಕಾದರೆ. ಬಸವ ತತ್ವದಲ್ಲಿ ನಂಬಿಕೆಯಿಟ್ಟು ಬದುಕಬೇಕು. ಮೋಕ್ಷ ಎಂಬ ಗುರಿ ಒಂದೇ ಆಗಿದ್ದರೂ ಭಕ್ತಿ, ಜ್ಞಾನ, ಕರ್ಮ ಮಾರ್ಗದಲ್ಲಿ ಮೋಕ್ಷಕಾಣ ಬಹುದು ಅದಕ್ಕೆ ದಾಸರು, ಶರಣರ ಬದುಕೇ ನಿಜವಾದ ನಿದರ್ಶನ ಎಂದು ಸ್ಮರಿಸಿದರು.
‘ಯತ್ರ ನಾರೇಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:’ ಎಂಬ ಸಂಸ್ಕøತ ಶ್ಲೋಕದಲ್ಲಿ ನಾರಿಯರನ್ನು ಗೌರವದಿಂದ ಕಾಣಬೇಕು ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಈ ಜಗತ್ತು ಪಾಪದ ಜಗತ್ತು. ಪುಣ್ಯವಂತಾಗಿ ಬದುಕಲು ಪಾಪಿಷ್ಟರು ಬಿಡಲ್ಲ. ತಾಯಿಯ ಗರ್ಭದಲ್ಲಿ ಜನಿಸಿದ ಮಗು ಹೊರ ಬಂದ ಮೇಲೆ ಲೋಕ ಮುಗಿಯುವ ತನಕ ಸಾಕಷ್ಟು ಹೋರಾಟ ಮಾಡಬೇಕಾಗುತ್ತದೆ. ಹುಟ್ಟಿದ ಮಗು ಅಳುತ್ತಲೇ ಹುಟ್ಟುತ್ತದೆ. ಆದರೆ ಸತ್ತಮೇಲೆ ಉಳಿದವರು ಅಳುವಂತೆ ಸಾಧನೆ ಮಾಡಿ ಸಾಯಬೇಕು ಎಂದರು.
ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ನಾನು ನನ್ನ ಮನೆ ದೇವರಾದ ತಿಮ್ಮಪ್ಪನ ಬೆಟ್ಟಕ್ಕೆ ಬಿಟ್ಟರೆ ಎಲ್ಲೂ ಯಾವ ದೇವಸ್ಥಾನಗಳಿಗೂ ಹೋದವನಲ್ಲ. ಆದರೆ ಶಿವಾನುಭವದ ಸೇರಿದ ಮೇಲೆ ಸಮಾಧನಾ ತಂದಿದೆ. ಚುನಾವಣೆಯ ವೇಳೆ ಆರೋಗ್ಯ ಏರು ಪೇರು ಆಗಿತ್ತು. ಆದರೆ ಧ್ಯಾನದಿಂದ ಎಲ್ಲವೂ ನಾರ್ಮಲ್ ಆಗಿದೆ. ಪ್ರಸ್ತುತ ದಿನಕ್ಕೆ ಎರಡು ಭಾರಿ ದೇವಸ್ಥಾನಕ್ಕೆ ಹೋಗುತ್ತೇನೆ. ದಿನಕ್ಕೆ ಒಂದು ಗಂಟೆ ದೇವರ ಧ್ಯಾನ ಮಾಡುತ್ತೇನೆ ಎಂದರು.
ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ ಅವರು ಕಾಯಕ ಜೀವಿ. ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿ ಐಆರ್‍ಎಸ್ ಮಾಡಿಸಿದ್ದಾರೆ. ವಿರಕ್ತ ಮಠಗಳು ಎಲ್ಲರನ್ನೂ ಒಪ್ಪುಕೊಳ್ಳುವ ಮಠಗಳು ಅದರಲ್ಲಿ ಸಿರಿಗೆರೆ ಮಠ ಸಾಮಾಜಿ ಕಾರ್ಯಕ್ಕೆ ಹೆಸರುವಾಸಿಯಾಗಿದೆ.
12 ನೇ ಶತಮಾನದ ಅನುಭವದ ಮಂಟಪದ ಸ್ಥೂಲವೇ ಇಂದಿನ ಸಂವಿಧಾನದಲ್ಲಿ ಮೇಳೈಸುದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಬಸವಣ್ಣನವರ ಸಂವಿಧಾನ ಅಂಶಗಳು ಅಡಕವಾಗಿದೆ ಎಂದು ಭಾವಿಸುತಗತೇನೆ ಎಂದರು. ಶ್ರೀ ಗುರು ಬಸವ ಸ್ವಾಮೀಜಿ ಆಶೀರ್ವಚನ ನೀಡಿದರು