ದಾವಣಗೆರೆ:ಸಿಎಲ್-2 ವೈನ್ ಸ್ಟೋರ್ ಸುತ್ತಮುತ್ತ ಕುಡಿಯಲು ಅವಕಾಶ, ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ!

Suddivijaya
Suddivijaya August 31, 2023
Updated 2023/08/31 at 7:10 AM

ಸುದ್ದಿವಿಜಯ,ದಾವಣಗೆರೆ :  ನಗರದಲ್ಲಿನ ಸಿಎಲ್-2 ವೈನ್‌ಗಳ ಸುತ್ತಮುತ್ತ ಕುಡಿಯಲು ಅವಕಾಶ ನೀಡಿದ್ದು, ಅಬಕಾರಿ ಇಲಾಖೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರೋದು ಯಾಕೆ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ನಾಗರಿಕರು ಸರಕಾರಕ್ಕೆ ಕೇಳಿದ್ದಾರೆ.

ಸಿಎಲ್-2 ವೈನ್‌ಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ, ಆದರೆ ವೈನ್ ಸ್ಟೋರ್ ಸುತ್ತಮುತ್ತ, ಹಿಂದೆ ಮುಂದೆ ಕುಡಿಯಲು ಅವಕಾಶ ನೀಡುವ ಹಾಗಿಲ್ಲ. ಹಾಗಿದ್ದರೂ ನಿಯಮ ಮೀರಿ ಕುಡಿಯಲು ಅವಕಾಶ ನೀಡಲಾಗಿದ್ದು, ಅಬಕಾರಿ ಡಿಸಿ ಸ್ವಪ್ನ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

 ನಗರದ ಶಾಮನೂರು ರಸ್ತೆಯಲ್ಲಿನ ಬಿಂದಾಸ್ ವೈನ್ ಸ್ಟೋರ್ ಇದಕ್ಕೆ ಸಾಕ್ಷಿಕರೀಸಿದೆ. ಈ ವೈನ್ ಸ್ಟೋರ್ ಸಿಎಲ್-2 ಆಗಿದ್ದು, ಇದರ ಸುತ್ತಮುತ್ತ ಎಣ್ಣೆ ಒಡೆಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಪೋಟೋ, ವಿಡಿಯೋ ಸಿಕ್ಕಿದೆ.

ಈ ವೈನ್ ಸ್ಟೋರ್ ಕೇವಲ ತಾಜಾ ಉದಾಹರಣೆಯಾಗಿದ್ದು, ಇತರೆಡೆಯೂ ಇಂತಹ ಘಟನೆಗಳು ನಡೆದಿವೆಯೋ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ. ಈ ವೈನ್‌ಸ್ಟೋರ್ ಹೈವೇ ಪಕ್ಕದಲ್ಲಿದ್ದು, ವೈನ್ ಸ್ಟೋರ್ ಸುತ್ತಮುತ್ತ ಖಾಲಿ ಜಾಗವಿದೆ. ಇಲ್ಲಿ ಮದ್ಯಪ್ರಿಯರು ಯಾರ ಭಯವಿಲ್ಲದೇ ಎಲ್ಲೆಂದರಲ್ಲಿ ಕುಡಿಯುತ್ತಿದ್ದಾರೆ. ಈ ರಸ್ತೆಯಲ್ಲಿ ಪೊಲೀಸರು ಸೇರಿದಂತೆ ಮದ್ಯದ ಅಧಿಕಾರಿಗಳು ಸಂಚಾರ ಮಾಡಿದರೂ ಗೊತ್ತಿಲ್ಲದಂತೆ ಅಧಿಕಾರಿಗಳು ಇದ್ದಾರೆ.

ಸಾಮಾನ್ಯವಾಗಿ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಪರವಾನಗಿ ರದ್ದುಗೊಳಿಸಲು ಅಬಕಾರಿ ಇಲಾಖೆಯು ಅಬಕಾರಿ ಕಾಯ್ದೆಯ ಸೆಕ್ಷನ್ 29ನ್ನು ಬಳಸಬಹುದು.  ಈ ಕಾಯ್ದೆಯ ಪ್ರಕಾರ ನಿಬಂಧನೆಗಳೊಂದಿಗೆ ಪರವಾನಗಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು.

ಈ ಹಿಂದೆ ಮದ್ಯದ ಅಂಗಡಿಗಳು ಬಿಲ್ ಕೊಡದೇ ಹೋದಾಗಲೂ ಕ್ರಮವಹಿಸದ ಅಧಿಕಾರಿಗಳು, ವೈನ್ ಸ್ಟೋರ್ ಸುತ್ತಮುತ್ತ ಕುಡಿಯುತ್ತಿದ್ದರೂ, ಅಬಕಾರಿ ಅಧಿಕಾರಿಗಳು ಮೌನವಹಿಸಿದ್ದಾರೆ. ಈ ಸಂಬಂಧ ನಾನಾ ಅನುಮಾನ ಶುರುವಾಗಿದ್ದು, ದಾವಣಗೆರೆ ಕಂದಾಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಈ ಬಗ್ಗೆ ಗಮನಹರಿಸಬೇಕಿದೆ.

ದಾವಣಗೆರೆ ಜಿಲ್ಲೆಯ ಅಬಕಾರಿ ಇನ್ಸೆಪೆಕ್ಟರ್‌ಗಳು ಈ ಬಗ್ಗೆ ಪ್ರತಿದಿನ ಗಮನಹರಿಸಬೇಕಿರುವುದು ಪ್ರಥಮ ಕೆಲಸವಾಗಿದ್ದು, ಆಗೊಮ್ಮೆ, ಈಗೊಮ್ಮೆ ಮಾತ್ರ ಭೇಟಿ ನೀಡುತ್ತಾರೆ.

ಇನ್ನು ಅಬಕಾರಿ ಡಿಸಿ ಕೇವಲ ಕಚೇರಿಗೆ ಸೀಮಿತವಾಗಿದ್ದು, ಹೊರಗಿನ ಘಟನಾವಳಿಗಳ ಬಗ್ಗೆ ತಿಳಿದುಕೊಳ್ಳುತ್ತಿಲ್ಲ. ಕೇವಲ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಅಬಕಾರಿ ಡಿಸಿ, ವಾಸ್ತವದಲ್ಲಿ ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದ ಸಿಎಲ್-2 ವೈನ್ ಇಟ್ಟಿರುವ ಮಾಲೀಕರು ತಮ್ಮ ಆಟವನ್ನು ಎಂದಿನಂತೆ ಮುಂದುವರಿಸಿದೆ.

ಒಂದು ಕಡೆ ಸರಕಾರ ಮದ್ಯದ ಮೇಲೆ ಶೇ.20ರಷ್ಟು ಹೆಚ್ಚು ಮಾಡಿದೆ, ಇನ್ನೊಂದು ಕಡೆ ಟಾರ್ಗೆಟ್‌ನ್ನು ಕೂಡ ಹೆಚ್ಚಿಗೆ ನೀಡಿದೆ.

ಇದರಿಂದ ವೈನ್‌ಸ್ಟೋರ್‌ಗಳಲ್ಲಿ ಕುಡಿಯಲು ಅವಕಾಶ ನೀಡಲಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಇನ್ನು ಈ ವೈನ್ ಸ್ಟೋರ್‌ಗಳಲ್ಲಿ ಮದ್ಯ ಕೊಳ್ಳುವ ಮದ್ಯಪ್ರಿಯನಿಗೆ ಬಿಲ್ ಸಹ ನೀಡುತ್ತಿಲ್ಲ. ಪರಿಣಾಮ ಗ್ರಾಹಕರಿಗೆ ವಂಚನೆಯಾಗುತ್ತಿದೆ.

ಶಾಮನೂರು ಗ್ರಾಮದ ಸಮೀಪವೇ ಈ ವೈನ್ ಸ್ಟೋರ್ ಇದ್ದು, ರಾತ್ರಿಯಾದರೆ ಸಾಕು ಈ ವೈನ್ ಸ್ಟೋರ್‌ಗೆ ಜಾತ್ರೆಯಂತೆ ಜನ ಬರುತ್ತಾರೆ. ಸುತ್ತಮುತ್ತ ಕತ್ತಲಿನ ವಾತಾವರಣ ಇರುವ ಕಾರಣ, ಆಟೋಗಳಲ್ಲಿ, ಬೈಕ್‌ನಲ್ಲಿ ಬರುವ ಗ್ರಾಹಕರು ಅಲ್ಲಿಯೇ ಸೈಡ್ಸ್ ತಗೊಂಡು ಕುಡಿಯುವುದಕ್ಕೆ ಕುಳಿತುಕೊಳ್ಳುತ್ತಾರೆ, ನಿಶೆ ಏರಿದಂತೆ ಸಮೀಪದಲ್ಲಿ ಇದ್ದ ವೈನ್ ಸ್ಟೋರ್‌ನಲ್ಲಿ ಎಣ್ಣೆ ಖರೀದಿ ಮಾಡಿ ಇಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ.

ಅಲ್ಲದೇ ಎಲ್ಲೆಂದರಲ್ಲಿ ಬಾಟಲ್‌ಗಳನ್ನು ಬಿಸಾಕಿ ಹೋಗುತ್ತಿದ್ದಾರೆ. ಇದರಿಂದ ಸುತ್ತಮುತ್ತ ಕಲುಷಿತ ವಾತಾವರಣ ಉಂಟಾಗುತ್ತಿದೆ.

ಒಟ್ಟಿನಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ವೈನ್ ಸ್ಟೋರ್ ಸುತ್ತಮುತ್ತ ಕುಡಿಯಲು ಅವಕಾಶ ಇರದೇ ಹೋದರೂ ಕುಡಿಯಲು ಅವಕಾಶ ನೀಡಿದ್ದು, ಅಬಕಾರಿ ಡಿಸಿ ಕಚೇರಿಯಿಂದ ಹೊರ ಬಂದು ಇತ್ತ ನೋಡಿ ಕ್ರಮ ವಹಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!