ಭತ್ತ ನಾಟಿ, ಇನ್ಮುಂದೆ ಇಲ್ಲ ವರ್ಕರ್ಸ್ ಭೇಟಿ, ತಂತ್ರಜ್ಞಾನವೇ ನೀನು ಬಲು ‘ನಾಟಿ’

Suddivijaya
Suddivijaya July 26, 2023
Updated 2023/07/26 at 1:35 PM

ಸುದ್ದಿವಿಜಯ,(ವಿಶೇಷ) ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವುದು ಅಂದ್ರೆ ಸಾಕು ಅತ್ಯಂತ ಶ್ರಮದ ಕೆಲಸ, ಇನ್ನೊಂದೆಡೆ ಕೂಲಿ ಆಳುಗಳ ಕೊರತೆ, ಈ ಕಾರಣದಿಂದ ದಾವಣಗೆರೆ ಜಿಲ್ಲೆಯ ರೈತರು ಭತ್ತ ನಾಟಿ ಮಾಡಲು ವಿದೇಶಿ ತಂತ್ರಜ್ಞಾನ ಬಳಸುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಈ ಭಾಗದಲ್ಲಿ ಹತ್ತಿ ಹೆಚ್ಚು ಬೆಳೆಯುತ್ತಿದ್ದ ಕಾರಣ ಮ್ಯಾಂಚೇಸ್ಟರ್ ಎಂಬ ಖ್ಯಾತಿ ಹೊಂದಿದ್ದ ಜಿಲ್ಲೆ ನೀರಾವರಿಯಾದ ನಂತರ ಇಲ್ಲಿನ ರೈತರು ಭತ್ತ ಬೆಳೆಯಲು ಮುಂದಾಗಿದ್ದರು. ಆದರೀಗ ದಿನ ಕಳೆದಂತೆ ಕೂಲಿ ಆಳುಗಳ ಸಮಸ್ಯೆಯಾದ ಕಾರಣ ಈಗ ಇಲ್ಲಿನ ಅನ್ನದಾತರು ಯಾಂತ್ರೀಕೃತ ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ.

ಈ ತಂತ್ರಜ್ಞಾನವನ್ನು ಜಪಾನ್ ಹಾಗೂ ಜರ್ಮನಿಯಲ್ಲಿ ಬಳಸಲಾಗುತ್ತಿದ್ದುಘಿ, ಈಗ ಇಲ್ಲಿನ ರೈತರು ಕೂಲಿ ಆಳುಗಳ ಸಮಸ್ಯೆ ನೀಗಿಸಲು ಯಂತ್ರದ ಮೊರೆ ಹೋಗಿದ್ದಾರೆ. ಕೆಸರು ಗದ್ದೆ ಮಾಡಿಕೊಳ್ಳುವುದರಿಂದ ಹಿಡಿದು ಕೊಯ್ಲು ಮಾಡಿ ಭತ್ತ ಮನೆಗೆ ತರುವವರೆಗೆ ಪ್ರತಿಯೊಂದು ಕೆಲಸಕ್ಕೂ ಆಳುಗಳು ಬೇಕು.

ಸಮಯಕ್ಕೆ ಸರಿ ಆಳುಗಳು ಸಿಗೋದಿಲ್ಲ. ಸಕಾಲದಲ್ಲಿ ಆಳುಗಳು ಸಿಗದೇ ಇರದ ಕಾರಣ ರೈತರು ಈ ಯಾಂತ್ರೀಕೃತ ಪದ್ಧತಿಗೆ ಮಾರು ಹೋಗಿದ್ದಾರೆ. ದಾವಣಗೆರೆ, ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಹರಿಹರ ಹೀಗೆ ಹತ್ತಾರು ಹಳ್ಳಿಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ.

ಮುಂಜಾನೆಯ ಮುಸ್ಸಂಜೆವರೆಗೆ ದುಡಿದರೂ ಮುಗಿಯದಷ್ಟು ಕೆಲಸ ಇರುತ್ತದೆ. ಹೆಚ್ಚು ಕೂಲಿ ಕೊಡುತ್ತೇವೆ ಎಂದು ಹೇಳಿದರೂ, ಆಳುಗಳು ಬರೋದಿಲ್ಲ. ಕಾರ್ಮಿಕರ ಕೊರತೆ ಇರುವ ಈ ಸಂದರ್ಭದಲ್ಲಿ ಯಂತ್ರಗಳು ಗದ್ದೆಗೆ ಇಳಿದು ನಾಟಿ ಮಾಡುತ್ತಿವೆ.

ರೈತರು ಸಸಿ ಮಡಿ ಚೆಲ್ಲಿಕೊಂಡು ನಂತರ ಕಿತ್ತು ನಾಟಿ ಮಾಡುವ ಪದ್ಧತಿಯನ್ನು ಸುಮಾರು 50 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು, ಈಗ ಆ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಬದಲಾದ ಸನ್ನಿವೇಶದಲ್ಲಿನಾಟಿ ಮಾಡಲಿಕ್ಕೆ ಕೃಷಿ ಕಾರ್ಮಿಕರ ಲಭ್ಯತೆ ಮತ್ತು ನಾಟಿ ಮಾಡುವ ಕೌಶಲ್ಯ ಪ್ರತಿ ವರ್ಷ ಕ್ಷಿಣಿಸುತ್ತಿದೆ ಹಾಗೂ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ.

ಆದರೆ ಯಾಂತ್ರಿಕೃತ ನಾಟಿ ಪದ್ಧತಿಯಲ್ಲಿ ಸಸಿಗಳ ಸಂಖ್ಯೆ, ಸಸಿಯಿಂದ ಸಸಿಗೆ, ಸಾಲಿನಿಂದ ಸಾಲಿಗೆ ಅಂತರ ಸರಿಯಾದ ರೀತಿಯಲ್ಲಿಇರುವುದರಿಂದ ಕೀಟ ರೋಗಗಳ ಬಾಧೆ ಕಡಿಮೆಯಾಗಿ ವೆಚ್ಚವೂ ಕಡಿಮೆ ಆಗಲಿದೆ.

ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಎಕೆರೆಯಲ್ಲಿಯಾಂತ್ರಿಕೃತ ನಾಟಿ ಪದ್ಧತಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಎಂಬತ್ತು ಆಳುಗಳು ಮಾಡಬಹುದಾದ ನಾಟಿ ಕೆಲಸವನ್ನು ಈ ಒಂದು ಯಂತ್ರ ಮಾಡುತ್ತದೆ. ದಿನಕ್ಕೆ 4 ರಿಂದ 6 ಎಕರೆಯಲ್ಲಿ ನಾಟಿ ಮಾಡುವ ಸಾಮಥ್ರ್ಯ ಅದಕ್ಕಿದೆ.

ಮೂರು ಗಂಟೆ ಅವಧಿಯಲ್ಲಿ, ಮೂರು ಲೀಟರ್ ಡೀಸೆಲ್ ಬಳಸಿಕೊಂಡು ಯಂತ್ರ ಸಹಾಯದಿಂದ ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಗದ್ದೆಯಲ್ಲಿ ನೀರು ಕಡಿಮೆ ಇದ್ದರೆ ಯಂತ್ರ ಸಲೀಸಾಗಿ ಗದ್ದೆಯಲ್ಲಿ ಓಡಾಡಿ ನಾಟಿ ಮಾಡುತ್ತದೆ.

ನಾಟಿ ವಿಧಾನ:

ಯಂತ್ರದ ಮೂಲಕ ಪೈರು ನಾಟಿ ಮಾಡಲು ಕೃತಕ ಸಸಿ ಮಡಿ ತಯಾರಿಕೆ ಬಹು ಮುಖ್ಯ. ಗದ್ದೆಗಳಲ್ಲಿ ಒಂದು ಮೀಟರ್ ಅಗಲದ 10 ಮೀ. ಉದ್ದದ ಪ್ಲಾಸ್ಟಿಕ್ ಹಾಳೆ ಹರಡಿ ಅದರ ಮೇಲೆ ಗೊಬ್ಬರ ಮಿಶ್ರಿತ ಮಣ್ಣನ್ನು 2 ಇಂಚು ದಪ್ಪ ಹರಡಬೇಕು.

ಮಣ್ಣಿನಲ್ಲಿ ಕಲ್ಲುಗಳಿರಬಾರದು. ಒಂದು ದಿನದ ಮೊಳಕೆಬಂದ ಭತ್ತದ ಬೀಜಗಳನ್ನು ಅದರ ಮೇಲೆ ಬಿತ್ತಬೇಕು. 18ರಿಂದ 20ದಿನಗಳಲ್ಲಿ ಪೈರು ನಾಟಿಗೆ ಸಿದ್ಧವಾಗುತ್ತದೆ. ಎಕರೆಗೆ 15ರಿಂದ 20ಕೆ.ಜಿ. ಬಿತ್ತನೆ ಬೀಜ ಬೇಕು. ಸಸಿ ಮಡಿ ತಯಾರಿಕೆಗೆ ಹೆಚ್ಚು ಜಾಗ ಬೇಕಿಲ್ಲ, ಸಮಾನ ಆಳ, ಅಂತರಕ್ಕೆ ನಾಟಿ ಮಾಡುವುದರಿಂದ ಪೈರು ಚೆನ್ನಾಗಿ ಬರುತ್ತದೆ.

ಇನ್ನು ದಾವಣಗೆರೆಯ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಈ ಭತ್ತದ ನಾಟಿ ಯಂತ್ರ ಬಾಡಿಗೆ ಸಿಗಲಿದ್ದುಘಿ, ಕೃಷಿ ಅಧಿಕಾರಿಗಳು ಯಂತ್ರದ ಮೂಲಕ ಭತ್ತ ನಾಟಿ ಮಾಡಲು ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರಣದಿಂದ ಹಲವು ರೈತರು ಭತ್ತ ನಾಟಿ ಮಾಡಲು ಯಂತ್ರದ ಮೊರೆ ಹೋಗಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!