ಸುದ್ದಿವಿಜಯ, ಜಗಳೂರು: ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರ ಹಿತಕಾಯಬೇಕು ಎಂದು ಒತ್ತಾಯಿಸಿ ಬುಧವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಎಂ.ವೈ ಮಹಾಂತೇಶ್ ಮಾತನಾಡಿ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ 20ಸಾವಿರಕ್ಕೂ ಹೆಚ್ಚು ಬಿ ಮತ್ತು ಸಿ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಾತಿ ಅರ್ಜಿ ಸಲ್ಲಿಸುವಿಕೆಯಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತನಕ ಕೇವಲ ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ನಡೆಯಲಿವೆ.
ಇದು ಕನ್ನಡಿಗರ ಉದ್ಯೋಗವಕಾಶಗಳಿಂದ ವಂಚಿತರನ್ನಾಗಿ ಮಾಡುವ ತಂತ್ರಗಾರಿಕೆ 2002ರಿಂದಲೂ ನಡೆದುಕೊಂಡು ಬಂದಿದೆ. ಇದು ನ್ಯಾಯ ಸಮ್ಮತವಲ್ಲದ ಅನುಕೂಲಗಳನ್ನು ಮಾಡಿಕೊಡುತ್ತಿರುವುದು ಖಂಡನೀಯ ಎಂದರು.
ಕನ್ನಡಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡದೇ, ಉದ್ಯೋಗವನ್ನು ನೀಡದೇ ಪರಭಾಷಿಗಳನ್ನೇ ಪ್ರತಿಯೊಂದು ಕ್ಷೇತ್ರಗಳಲ್ಲೂ ನೇಮಕ ಮಾಡಿಕೊಳ್ಳುವುದು ಎಷ್ಟು ಸರಿ. ಕರ್ನಾಟದಲ್ಲಿ ಗಾಳಿ, ನೀರು, ಬೆಳಕು, ನೆಲ ಸೇರಿದಂತೆ ಅಗತ್ಯ ಸಂಪನ್ಮೂಲಗಳನ್ನು ಪಡೆದುಕೊಂಡು ನಮ್ಮವರಿಗೆ ಉದ್ಯೋಗವಕಾಶ, ಸ್ಥಾನ ಮಾನಗಳನ್ನು ನೀಡಿಲ್ಲವೆಂದರೆ ಇಂತಹ ಪರೀಕ್ಷೆಗಳನ್ನು ನಡೆಸುವುದೇ ಬೇಡ. ಕನ್ನಡಿಗರಿಗೆ ನ್ಯಾಯ ಸಿಗುವವರೆಗೂ ಕರವೇ ನಿರಂತರ ಹೋರಾಟಕ್ಕೆ ಸಿದ್ದವಾಗಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲ ಆರ್. ಓಬಳೇಶ್, ಕಾರ್ಯಕರ್ತರಾದ ಶ್ರೀ ಹರ್ಷ, ಸುರೇಶ್, ಮುನ್ನ, ಎಂ.ಡಿ ಅಬ್ದುಲ್ ರಕೀಬ್, ಜಿ.ಟಿ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.