ಸುದ್ದಿವಿಜಯ, ಜಗಳೂರು: ಪಟ್ಟಣದ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಬೆಂಗಳೂರಿನ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಾಗೃತ ಕೋಶದ ಅಧಿಕಾರಿಗಳು ಶುಕ್ರವಾರ ದಿಢೀರ್ ಭೇಟಿ ನೀಡಿ, ಅಕ್ರಮ ದಾಸ್ತಾನು ಮಾಡಿದ್ದ ಔಷಧಗಳನ್ನು ಜಪ್ತಿ ಮಾಡಿದರು.
ಪಟ್ಟಣದ ಶ್ರೀ ಗುರು ಆಗ್ರೋ ಸಪ್ಲೈಸ್ ಮಳಿಗೆಯ ಮಾಲೀಕರಾದ ಎ.ಎಸ್.ನಾಗರತ್ನ ಅವರು ಲೈಸೆನ್ಸ್ ಇಲ್ಲದೇ 1.50 ಲಕ್ಷ ರೂ ಮೌಲ್ಯದ 1558 ಕೆ.ಜಿಗೂ ಹೆಚ್ಚು ಮೆಲಾಥಿಯನ್ ಔಷಧವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ದೂರು ಆಧರಿಸಿ ಔಷಧಗಳನ್ನು ಜಪ್ತಿಮಾಡಿದ್ದೇವೆ ಎಂದು ಬೆಂಗಳೂರು ಜಾಗೃತ ಕೋಶದ ಅಧಿಕಾರಿ ಆಸೀಫ್ ವುಲ್ಲಾ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.
ಮೊದಲಿಗೆ ಜಗಳೂರು ತಾಲೂಕಿಗೆ ಭೇಟಿ ನೀಡಿದ್ದೇವೆ. ಕೆಲವೊಂದು ಖಾಸಗಿ ಕೃಷಿ ಪರಿಕರ ಮಾರಾಟಗಾರರು ಅಕ್ರಮ ಎಸಗಿರುವ ಬಗ್ಗೆ ದೂರುಗಳು ಬಂದಿದ್ದವು.
ಅಕ್ರಮ ದಾಸ್ತಾನು ಮಾಡುವ ಮಳಿಗೆಗಳನ್ನು ರ್ಯಾಂಡಮ್ ಸೆಲೆಕ್ಷನ್ ಮಾಡಿಕೊಂಡು ಅನಿರೀಕ್ಷಿತವಾಗಿ ಭೇಟಿ ನೀಡುತ್ತೇವೆ. ಈಗ ದೊರಕಿರುವ ಔಷಧವನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ರೈತರು ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿಗೆ ಹಣಕೊಡದೇ ಪ್ರಶ್ನೆ ಮಾಡುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು.
ಕೃತಕ ಅಭಾವ ಸೃಷ್ಟಿಸುವ ಅಂಗಡಿಗಳ ಮಾಲೀಕರ ವಿರುದ್ಧ ಹತ್ತಿರ ಆರ್‍ಎಸ್‍ಕೆ ಅಥವಾ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಗಮನಕ್ಕೆ ತಂದರೆ ಅವರ ಮೇಲೆ ರಸಗೊಬ್ಬರ ನಿಯಂತ್ರಣ ಕಾಯ್ದೆ ಅನುಸಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವರಿಗೆ ನೀಡಿರುವ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪಟ್ಟಣದ ಸಾಯಿ ಆಗ್ರೋ, ಶಿವಲೀಲಾ, ಶ್ರೀ ವೀರಭದ್ರೇಶ್ವರ ಆಗ್ರೋ ಏಜೆನ್ಸಿ ಸೇರಿದಂತೆ ವಿವಿಧ ಮಳಿಗೆಗಳ ಮೇಲೆ ದಾಳಿ ಮಾಡಿ ನೋಟಿಸ್ ನೀಡಿದರು.
ಈ ವೇಳೆ ಬೆಂಗಳೂರಿನ ಉಪಕೃಷಿ ನಿರ್ದೇಶಕರಾದ ಅನೀಸ್ ಸಲ್ಮಾ, ಸಹಾಯಕ ಕೃಷಿ ನಿರ್ದೇಶಕರಾದ ವಿಜಯ ಸವಣೂರು, ದಾವಣಗೆರೆ ಜಿಲ್ಲಾ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿ ಬಿ.ವಿ.ಶ್ರೀನಿವಾಸುಲು, ವಿ.ಪಿ.ಗೋವರ್ಧನ್ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್, ಬೀರಪ್ಪ, ಜೆ.ಗಿರೀಶ್ ಸೇರಿದಂತೆ ಅನೇಶಕ ಅಧಿಕಾರಿಗಳು ಇದ್ದರು.