ಸುದ್ದಿವಿಜಯ, ಜಗಳೂರು: ಪಟ್ಟಣದ ತುಮಾಟಿ ಲೇಔಟ್ನಲ್ಲಿ ಪ್ರತಿಷ್ಠಾಪನೆಯಾಗಿದ್ದ 8ನೇ ವರ್ಷದ ಬಾಲ್ಯ ಗಣಪತಿಯನ್ನು ಸಾವಿರಾರು ಜನ ಭಕ್ತರು ವಿವಿಧ ಕಲಾಪ್ರಕಾರಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡುವ ಮೂಲಕ ಸೋಮವಾರ ವಿಸರ್ಜನೆ ಮಾಡಲಾಯಿತು.
13 ದಿನಗಳ ಕಾಲ ಬಾಲ್ಯ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಭಕ್ತರು ಬೃಹತ್ ಶೋಭಾ ಯಾತ್ರೆಯಲ್ಲಿ ಪಟ್ಟಣದ ಕೆರೆಯಲ್ಲಿ ವಿಸರ್ಜನೆ ಮಾಡಿದರು. ಮಹಿಳೆಯರ ಡೊಳ್ಳುಕುಣಿತ, ಕಂಸಾಳೆ ನೃತ್ಯ, ಸೋಮನಕುಣಿತ, ನಾಸಿಕ್ ಡೋಲ್, ಗೊಂಬೆ ಕುಣಿತ, ಡ್ರಮ್ಸೆಟ್, ಡಿಜೆ ಡ್ಯಾನ್ಸ್ ಮೂಲಕ ಸಾವಿರಾರು ಮಂದಿ ಕುಣಿದು ಕುಪ್ಪಳಿಸಿದರು.
ಮಧ್ಯಾಹ್ನ 3 ಗಂಟೆಗೆ ಆರಂಭವಾದ ಶೋಭಾಯಾತ್ರೆಯ ಮೂಲಕ ಗಣಪತಿ ವಿಸರ್ಜನೆಯ ಮೆರವಣಿಗೆ ರಾತ್ರಿ 12 ಗಂಟೆಗೆ ಅಂತ್ಯವಾಯಿತು. ಪಟ್ಟಣದ ಪ್ರಮುಖ ಬೀದಿಯಾದ ತುಮಾಟಿ ಲೇಔಟ್ನಿಂದ ಅಂಬೇಡ್ಕರ್ ವೃತ್ತ, ಡಾ.ರಾಜ್ಕುಮಾರ್ ರಸ್ತೆ, ಗಾಂಧಿವೃತ್ತ, ನೆಹರೂ ರಸ್ತೆಯ ಮೂಲಕ ಸಾಗಿ ಕೆರೆ ಅಂಗಳ ತಲುಪಿತು.
ಎಲ್ಲಿ ನೋಡಿದರೂ ಕೇಸರಿ ಬಣ್ಣದ ಧ್ವಜಗಳು, ಕೇಸರಿ ಬಣ್ಣದ ಪಟಗಳು ರಾರಾಜಿಸುತ್ತಿದ್ದವು. ಶಾಸಕ ಎಸ್.ವಿ.ರಾಮಚಂದ್ರ ಶೋಭಾಯಾತ್ರೆ ಹಾಗೂ ಗಣಪತಿ ವಿಸರ್ಜನೆಗೆ ಚಾಲನೆ ನೀಡಿದರು. ಎಬಿವಿಪಿ ಮುಖಂಡರು, ಕಾರ್ಯಕರ್ತರು, ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.