ಸುದ್ದಿವಿಜಯ, ಜಗಳೂರು: ಮಹಾತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿದ ಕೆಲಸಕ್ಕೆ ಕಡಿಮೆ ಕೂಲಿ ಹಾಕಿರುವ ತಾಂತ್ರಿಕ ಇಂಜಿನಿಯರ್ ವಿರುದ್ದ ಗುರುವಾರ ತಾಲೂಕಿನ ಕೆಚ್ಚೇನಹಳ್ಳಿ ಗ್ರಾಪಂ ಮುಂಭಾಗ ಗ್ರಾಕೂಸ್ ನೇತೃತ್ವದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಪಂಚಾಯಿತಿಗೆ ಆಗಮಿಸಿದ ಕೂಲಿಕಾರರು ಇಂಜಿನಿಯರ್ ಮತ್ತು ಪಿಡಿಒ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ಬಿಡುವಿಲ್ಲದ ಸುರಿದ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಕೂಲಿಕಾರರು ಅಧಿಕಾರಿಗಳ ವಿರುದ್ದ ಗುಡುಗಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಜನ ಕೂಲಿಕಾರರು ನರೇಗಾ ಯೋಜನೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿತ್ಯ ಮಳೆ, ಬಿಸಿಲು ಎನ್ನದೆ ಬೆವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಸರಿಯಾದ ಕೂಲಿ ಕೊಡದೇ ಕಡಿಮೆ ಎಂಬಿ ಬರೆದು ಹಣ ಕಡಿತ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಸಂಚಾಲಕಿ ಸುಧಾ, ಕಾರ್ಮಿಕರಾದ ರುದ್ರೇಶ್ ಬಸವರಾಜಯ್ಯ, ಮನೂರಪ್ಪ, ಉಮೇಶ್, ಬಸಮ್ಮ, ಕಲ್ಲಮ್ಮ, ಕಲಾವತಿ ,ವಸಂತ ,ದೇವಿ ಬಸಮ್ಮ ಇದ್ದರು.
ಸ್ಥಳಕ್ಕೆ ಇಒ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ತಾ.ಪಂ ಇಒ ಚಂದ್ರಶೇಖರ್ ಭೇಟಿ ನೀಡಿ ಕೂಲಿಕಾರರ ಸಮಸ್ಯೆಗಳನ್ನು ಆಲಿಸಿದರು. ತಾಂತ್ರಿಕ ಇಂಜಿನಿಯರ್ ಸರಿಯಾಗಿ ಸ್ಪಂದಿಸದೇ ತಮ್ಮಗೆ ಇಷ್ಟಬಂದಂತೆ ವರ್ತಿಸುತ್ತಿದ್ದಾರೆ. ಮಾಡಿದ ಕೆಲಸಕ್ಕೂ ಕಡಿಮೆ ಕೂಲಿ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು. ನಂತರ ಕಾಮಗಾರಿ ಸ್ಥಳಕ್ಕೆ ಕೂಲಿಕಾರರ ಜತೆ ಆಗಮಿಸಿದ ಇಒ ಪರಿಸ್ಥಿತಿ ಅವಲೋಕಿಸಿ ಭಯ ಬೇಡ ನಿಮ್ಮೊಂದಿಗೆ ನಾನಿದ್ದೇನೆ. ಎಲ್ಲವನ್ನು ಸರಿಪಡಿಸಲಾಗುವುದು, ಈಗ ಆಗಿರುವ ಘಟನೆಯವನ್ನುಮರುಕಳಿಸದಂತೆ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರಿಂದ ಕೂಲಿಕಾರರು ಪ್ರತಿಭಟನೆ ಹಿಂಪಡೆದರು.