ಸುದ್ದಿವಿಜಯ, ಜಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಕಾಲಚಕ್ರ ಹೀಗೆ ಇರುವುದಿಲ್ಲ ಅದು ಉರುಳುತ್ತಿದ್ದು ಕಾಂಗ್ರೆಸ್‍ಗೂ ಉಜ್ವಲವಾದ ಭವಿಷ್ಯವಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಭರವಸೆಯ ಮಾತುಗಳನ್ನಾಡಿದರು.
ತಾಲೂಕಿನ ಚಿಕ್ಕಉಜ್ಜಿನಿ ಗ್ರಾಮದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ದಿನವೇ ಸ್ವಾತಂತ್ರ್ಯ ವೀರಸೇನಾಯಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಮೃತ ಸ್ವಾಂತ್ರೋತ್ಸವದ ಸವಿನೆನಪಿಗಾಗಿ 125 ಕಿ.ಮೀ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟೀಷರು ನಮ್ಮ ದೇಶವನ್ನು ಆಳ್ವಿಕೆ ಮಾಡಿ ಲೂಟಿ ಮಾಡಿದರೂ. ಅವರಿಂದ ಸ್ವಾತಂತ್ರ್ಯ ಪಡೆಯಲು ಕಾಂಗ್ರೆಸ್‍ನ ಅನೇಕ ಮಹಾನ್ ನಾಯಕರು ರಕ್ತಕೊಟ್ಟರು. ಅವರನ್ನು ನೆನೆಯುವ ದೃಷ್ಟಿಯಿಂದ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ 75 ಕಿ.ಮೀ ಪಾದಯಾತ್ರೆ ಆರಂಭಿಸಿದ್ದಾರೆ.
ಹಾಗೆಯೇ ನಾವು ಸಹ ಜಗಳೂರು ವಿಧಾನಸಭಾ ಕ್ಷೇತ್ರದ ಚಿಕ್ಕಉಜ್ಜಿನಿ ಗ್ರಾಮದಿಂದ ಅರಸೀಕರೆಯವರೆಗೂ ಪಾದಯಾತ್ರೆ ನಡೆಸುತ್ತೇವೆ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ ಹೇಳಿದಂತೆ ಆಗಿನ ಸಿಎಂ ಸಿದ್ದರಾಮಯ್ಯನವರು 165 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ. ಬುದ್ದ, ಬಸವ, ಗಾಂಧೀಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಅಡಿ ಸಮಾನತೆಗೆ ಒತ್ತು ನೀಡುತ್ತಿದ್ದೇವೆ ಎಂದರು.
ಭ್ರಷ್ಟ ಬಿಜೆಪಿ ಸರಕಾರ ಕಿತ್ತೊಗೆಯಿರಿ:
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಸಮಾರಂಭ ಕಾಂಗ್ರೆಸ್ ಪಕ್ಷಕ್ಕೆ ಭರವಸೆಯ ಬೆಳಕು ಮೂಡಿಸಿದೆ. ಈ ದೇಶವನ್ನು ಕಾಂಗ್ರೆಸ್ 60 ವರ್ಷ ಆಳ್ವಿಕೆ ಮಾಡಿದರೂ 54 ಲಕ್ಷ ಕೋಟಿ ಸಾಲ ಮಾಡಿತ್ತು. ಬಿಜೆಪಿ ಕೇವಲ ಏಳು ವರ್ಷಗಳಲ್ಲಿ 102 ಲಕ್ಷ ಕೋಟಿ ರೂ. ಸಾಲ ಮಾಡಿದೆ.
ಈಗಿನ ಶಾಸಕ ಎಸ್.ವಿ.ರಾಮಚಂದ್ರ ಅವರು ಪ್ರತಿ ಇಲಾಖೆಯಲ್ಲಿ ಶೇ.40ರಷ್ಟು ಪರ್ಸೆಂಟೇಜ್ ಪಡೆಯುತ್ತಿದ್ದಾರೆ. ಕಳಪೆ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತು ಹಾಕಿ ಬರುವ 2023ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್‍ಗೆ ಪಕ್ಷಕ್ಕೆ ಆಶೀರ್ವದಿಸಿ ಎಂದರು.
ಮೂಲಭೂತ ಹಕ್ಕುಗಳನ್ನು ಕಸಿಯುವ ಪ್ರಯತ್ನ!
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಇಡೀ ದೇಶದಲ್ಲಿ ಮೂಲಭೂತ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇಷ್ಟವಾದ ಧರ್ಮ, ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಅಂಬೇಡ್ಕರ್ ಕೊಟ್ಟ ಸಂವಿಧಾನ ಕಿತ್ತುಕೊಳ್ಳುವ ಹುನ್ನಾರವನ್ನು ಕೇಂದ್ರ, ರಾಜ್ಯ ಸರಕಾರಗಳು ಮಾಡುತ್ತಿವೆ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಠೇವಣಿ ಕಳೆಯಬೇಕು. ಇವರ ಭ್ರಷ್ಟ ಆಡಳಿತಕ್ಕೆ ಜನತಾ ನ್ಯಾಯಾಲಯದಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ನಾಯಕರನ್ನು ನೆನೆದು ಅವರ ಶೌರ್ಯ ಬಲಿದಾನಗಳನ್ನು ಸಾರ್ವಜನಿಕರಿಗೆ ತಿಳಿಸುವುದೇ ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‍ರಾಜ್‍ಪಾಟೀಲ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಪ್ರತಿ ಗ್ರಾಮಗಳಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಕಾಂಗ್ರೆಸ್ ಸಿದ್ದಾಂತಗಳನ್ನು ಜನಸಾಮಾನ್ಯರ ಮನ ಮನೆಗಳಿಗೆ ತಿಳಿಸುವುದೇ ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕಂಬತ್ತಳ್ಳಿ ಮಂಜುನಾಥ್, ಶಿವಕುಮಾರ್, ನಾಗರತ್ನಮ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ, ಸೂರಯ್ಯ, ತಿಪ್ಪೇಸ್ವಾಮಿ, ರೆಡ್ಡಿಗೌಡ್ರು, ಪ್ರಕಾಶ್ ರೆಡ್ಡಿ, ಚಿತ್ತಣ್ಣ, ಕಲ್ಲಳ್ಳಿ ಹನುಮಂತಪ್ಪ, ಅರಸೀಕರೆ ಪೂಜಾರ್ ಮರಿಯಪ್ಪ, ಅಜ್ಜಪ್ಪ, ಎಲ್.ಬಿ. ಬೈರೇಶ್, ರುದ್ರೇಶ್, ಸೊಕ್ಕೆ ನಾಗರಾಜ್, ಶೇಖಪ್ಪಗೌಡ್ರು, ರವೀಶ್‍ಗೌಡ್ರು, ತಿಪ್ಪರಾಯಣ್ಣ, ಗೋಣೆಪ್ಪ, ದೇವರಾಜ್, ಚೌಡಪ್ಪ, ವೆಂಕಟೇಶ್, ಕುಪೇಂದ್ರಪ್ಪ, ಗುರುಸಿದ್ದಪ್ಪ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.