ಸುದ್ದಿವಿಜಯ, ಜಗಳೂರು: ಕೋವಿಡ್-19 ರೂಪಾಂತರಿ ತಳಿ ಬಿಎಫ್-7 ಅರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲ ಕಡೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ಕೋವಿಡ್ ಟಾಸ್ಕ್‍ಫೋರ್ರ್ಸ್ ಸಲಹಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸರಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಇಲಾಖೆಗಳಿಗೆ ಬರುವ ನಾಗರಿಕರಿಗೆ ಗೊತ್ತಾಗುವಂತೆ ಕಚೇರಿಯ ಮುಂದೆ ದೊಡ್ಡದಾಗಿ ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು.
ಆರೋಗ್ಯ ಇಲಾಖೆ ಅಧಿಕಾರಿಗಳು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜತೆ ಸೇರಿ ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೆಯುವಂತೆ ಶಿಬಿರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಹಾಕಿಸುವ ಕೆಲಸ ಆಡಿ ಎಂದು ಆರೋಗ್ಯ ಇಲಾಖೆ ಟಿಎಚ್‍ಓ ಡಾ.ನಾಗರಾಜ್ ಮತ್ತು ಮುಖ್ಯವೈದ್ಯಾಧಿಕಾರಿ ಡಾ.ಬಿ.ವಿ. ನೀರಜ್ ಅವರಿಗೆ ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 16 ಐಸಿಯು ಬೆಡ್, 6 ಎರ್ಮಜನ್ಸಿ ಬೆಡ್‍ಗಳು, 70 ಸಾಮಾನ್ಯ ಆಕ್ಸಿಜನ್ ಬೆಡ್‍ಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.
13 ಜನ ವೈದ್ಯರು, 38 ಸ್ಟಾಪ್ ನರ್ಸ್‍ಗಳು, 5 ಜನ ಲ್ಯಾಬ್ ಟೆಕ್ನಿಷಿಯನ್ಸ್, 4 ಅಂಬುಲೆನ್ಸ್‍ಗಳು ಇವೆ. ಐಎಲ್‍ಐ, ಸಾರಿ ಕೇಸ್‍ಗಳು ಬಂದರೆ ಪರೀಕ್ಷೆಗಾಗಿ ಒಂದು ಕೋಠಡಿಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದರು.
ಟಿಎಚ್‍ಓ ಡಾ.ನಾಗರಾಜ್ ಮಾತನಾಡಿ, ಕೋವಿಡ್ ಬಗ್ಗೆ ಭಯ ಬೇಡ, ಜಾಗೃತವಾಗಿದ್ದರೆ ಸಾಕು. ಸರಕಾರದ ಗೈಡ್ ಲೈನ್ಸ್‍ಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರೋಣ. ಆರ್‍ಟಿಪಿಸಿಆರ್ ಟೆಸ್ಟ್ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮಾಡಿಸಲು ರೆಡಿ ಇದ್ದೇವೆ.
ಈಗಾಗಲೇ ಶೇ.16 ಬೂಸ್ಟರ್ ಡೋಸ್ ಕೊಡಲಾಗಿದೆ. ಉಳಿದಂತೆ ಶೇ.75 ಬೂಸ್ಟರ್ ಡೋಸ್ ಕೊಡಲು ಗ್ರಾಮೀಣ ಪ್ರದೇಶದಲ್ಲಿ ಕ್ಯಾಂಪ್‍ಗಳನ್ನು ಮಾಡುತ್ತೇವೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಬೇಕು ಎಂದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ ಮಾತನಾಡಿ, ಪಟ್ಟಣದಲ್ಲಿ ಕೋವಿಡ್ ನಿಯಂತ್ರಣ ಮತ್ತು ಜಾಗೃತಿಗಾಗಿ ವಾಹನಗಳ ಮೂಲಕ ಪ್ರಚಾರ ಮಾಡಿಸುತ್ತೇವೆ ಎಂದರು.
ಸಿಪಿಐ ಎಂ.ಶ್ರೀನಿವಾಸ್ ಮಾತನಾಡಿ, ಪೊಲೀಸ್ ಇಲಾಖೆ ಆರೋಗ್ಯ ಮತ್ತು ತಾಲೂಕು ಆಡಳಿತದ ಗೈಡ್ ಲೈನ್ಸ್ ಅನುಸಾರ ಸಿನಿಮಾ ಟಾಕೀಸ್, ಕಲ್ಯಾಣ ಮಂಟಪ ಮತ್ತು ಸರಕಾರಿ ಕಚೇರಿಗಳಲ್ಲಿ ಮಾಸ್ಕ್ ಕಡ್ಡಾಯವಾಗುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.
ತಾಪಂ ಇಓ ಚಂದ್ರಶೇಖರ್ ಮಾತನಾಡಿ, ಗ್ರಾಪಂ ಪಟ್ಟದಲ್ಲಿ ಕಮಿಟಿ ಪುನರ್ ರಚನೆಗೆ ಈಗಾಲೇ ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಸೇರಿದಂತೆ ಅನೇಕ ಅಧಿಕಾರಿಗಳು ಕೋವಿಡ್ ಸಲಹಾ ಸಮಿತಿ ಸಭೆಯಲ್ಲಿ ಇದ್ದರು.