ಸುದ್ದಿವಿಜಯ,ಜಗಳೂರು: ಸರಕಾರದ ಸೌಲಭ್ಯಗಳು ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ವರ್ಗದ ಜನರಿಗೆ ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯನ್ನು ವರ್ಗೀಕರಣ ಮಾಡಿ ಅತ್ಯಂತ ಸೂಕ್ಷ್ಮ ಸಮುದಾಯಗಳನ್ನು ಹುಡುಕಿ ಸವಲತ್ತುಗಳನ್ನು ತಲುಪಿಸುತ್ತದ್ದೇವೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಶಿ ಹೇಳಿದರು.
ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನಡೆಹಳ್ಳಿ ಕಡೆ ಗ್ರಾಮ ವಾಸ್ತವ್ಯ ಉದ್ಘಾಟಿಸಿ ಮಾತನಾಡಿದರು.
1947ರ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ದೇಶದ ಪರಿಸ್ಥಿತಿ ಅವಲೋಕಿಸಿದರೆ ತೀರಾ ಶೋಚನೀಯವಾಗಿತ್ತು. ಪ್ರಸ್ತುತ ಅಂಕಿ ಸಂಖಿಗಳೇ ಅಭಿವೃದ್ಧಿಯ ಸೂಚ್ಯಾಂಕವನ್ನು ಹೇಳುತ್ತಿವೆ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡಾಗ ಖಂಡಿತವಾಗಿಯೂ ಅಭಿವೃದ್ಧಿ ಪಥದಲ್ಲಿ ನಾವು ಸಾಗುತ್ತಿದ್ದೇವೆ.
ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಕೊಡುತ್ತಿದ್ದ ಉಪ್ಪಿಟ್ಟಿನ ರವೆ, ಎಣ್ಣೆ ನಮ್ಮದಾಗಿರಲಿಲ್ಲ. ನನಗೆ ಈಗಲೂ ನೆನಪಿದೆ ಅಮೆರಿಕಾದಿಂದ ಎಣ್ಣೆ, ಗೋಧಿ ಬರುತ್ತಿತ್ತು. ಆದರೆ ನಾವು ಈಗ ಅಮೆರಿಕಾದಿಂದ ಯಾವದೇ ಆಹಾರ ಉತ್ಪಾದನೆಗಳನ್ನು ಆಮದು ಮಾಡಿಕೊಳ್ಳದೇ ಸ್ವಾವಲಂಬಿಗಳಾಗಿದ್ದೇವೆ.
ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರದ ಉತ್ಪಾದನೆಯಲ್ಲಿ ಅಗತ್ಯವಿದೆ. ಆಹಾರ ಉತ್ಪಾದನೆ ಜಾಸ್ತಿಯಾಗಿ ಸ್ವವಲಂಬಿಗಳಾಗಿರುವುದರಿಂದ ಬೇರೆ ದೇಶಗಳ ಮುಂದೆ ಕೈ ಚಾಚುವ ಪರಿಸ್ಥಿತಿ ಇಲ್ಲವಾಗಿದೆ ಎಂದರು.
ನೀರಾವರಿ ಯೋಜನೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿಯಾಗಲು ನೀರಾವರಿ ತಜ್ಞರು, ರಾಜಕೀಯ ಮಖಂಡರು, ಅಧಿಕಾರಿಗಳು ಸಂಪನ್ಮೂಲಗಳನ್ನು ಕೃಢೀಕರಿಸಿದ್ದರಿಂದ ಯೋಜನೆಗಳು ಯಶಸ್ವಿಯಾಗುತ್ತಿವೆ. ಅಣೆಕಟ್ಟುಗಳ ನಿರ್ಮಾಣ ಮಾಡಿ ಕಾಲುವೆಗಳ ಮೂಲಕ ನೀರಿ ಹರಿಸಿದ್ದರಿಂದ ಆಹಾರದ ಉತ್ಪಾದನೆ ಹೆಚ್ಚಾಯಿತು ಎಂದರು.
ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರು ಸಾಯುವ ಸಂಖ್ಯೆ ಕಡಿಮೆಯಾಗಿದೆ. ಮೊದಲು ಹಿಂದುಳಿದ ವರ್ಗಗಳಿಗೆ ಸೌಲಭ್ಯಗಳು ತಲುಪಿಸಿ ನಂತರ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಸ್ತುತ ಎಲ್ಲ ಸಮುದಾಯಗಳಿಗೆ ಸೌಲಭ್ಯಗಳು ಹಂಚಿಕೆಯಾಗುತ್ತಿವೆ.
ಅಲೆಮಾರಿ, ಅರೆ ಅಲೆಮಾರಿಗಳಿಗೆ ವಸತಿ ಯೋಜನೆ ಸೌಲಭ್ಯವನ್ನು ಸರಕಾರವೇ ಹುಡುಕಿ ಕೊಡುವ ವ್ಯವಸ್ಥೆ ಮಾಡುತ್ತಿದೆ ಎಂದರು.
ಸರಕಾರ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಸೂಕ್ಷ್ಮವಾಗಿ ಕೂಲಂಕಷವಾಗಿ ಪರಿಶೀಲಿಸುತ್ತದೆ. ಅಂಕಿ ಸಂಖಿಗಳ ಕಲೆ ಹಾಕಿ ಶಿಕ್ಷಣ, ಆರೋಗ್ಯ, ಆರ್ಥಿಕ, ಸಾಮಾಜಿಕ, ಕೃಷಿ, ಕೈಗಾರಿಕ ಸೌಲಭ್ಯ ಸೇರಿದಂತೆ ಕ್ರಮಬದ್ಧವಾಗಿ, ಕಾಲಬದ್ಧವಾಗಿ ನೀಡುತ್ತಿದೆ. ವಿಕೇಂದ್ರಿಕರಣ ಮಾಡಿ ಸೌಲಭ್ಯಗಳ ಹಂಚಿಕೆ ಅನುದಾನ ಹೆಚ್ಚಿಸುತ್ತಿದೆ.
ಗ್ರಾಪಂ, ತಾಪಂ ಮತ್ತು ಜಿಪಂಗಳಿಂದಲೂ ಸೌಲಭ್ಯಗಳು ಹಳ್ಳಿಕಡೆ ಹರಿಯುತ್ತಿದೆ. ಗ್ರಾಮವಾಸ್ತವ್ಯದಿಂದ ಸರಕಾರವೇ ಮನೆ ಬಾಗಲಿಗೆ ಬಂದು ಸಮಸ್ಯೆ ಆಲಿಸುತ್ತಿದೆ ಸೌಲಭ್ಯಗಳನ್ನು ಪಡೆದುಕೊಂಡು ಸರ್ವರೂ ಪಾಲುದಾರರಾಗಬೇಕು ಎಂದರು.
ಜಿಪಂ ಸಿಇಒ ಡಾ.ಚನ್ನಪ್ಪ ಮಾತನಾಡಿ, ಬೀಜದಲ್ಲಿ ಎಣ್ಣೆ, ಹಾಲಿನಲ್ಲಿ ಬೆಣ್ಣೆ ಇದ್ದಂತೆ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸಂಬಂಧವಾಗಿದೆ.
ಹಾಲುಕುಡಿಯುವಾಗ ಬೆಣ್ಣೆ ಶೇಂಗಾ ತಿನ್ನುವಾಗ ಎಣ್ಣೆ ಎರಡನ್ನು ಸೇವಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾಗಿದೆ.
12ನೇ ಶತಮಾನದಲ್ಲಿ ಬಸವಣ್ಣನವರು ಇಡೀ ಬಂಡಾದ ಒಡೆಯನಾಗಿದ್ದ. ಯಾರು ಏನು ಕೇಳಿದರೂ ಕೊಡುತ್ತಿದ್ದ. ಆದರೆ ಬಸವಣ್ಣ ‘ಬೇಡುವವರು ಇಲ್ಲದೇ ಬಡವನಾನಾದೆನಯ್ಯ ಎಂದು ಹೇಳಿದ್ದರು. ಆದರೆ ಆ ಕಾಲದಲ್ಲಿ ಯಾರು ಬೇಡುತ್ತಿಲ್ಲ ಎಂದು ಅರ್ಥವಲ್ಲ. ಬೇಕಾಗಿದ್ದುದ್ದನ್ನು ಅಷ್ಟೇ ಬೇಡುತ್ತಿದ್ದರು. ಆದರೆ ಈಗ ಸರಕಾರ ಇದ್ದ ಮೇಲೆ ಎಲ್ಲವೂ ಸರಕಾರದ್ದೇ ಜವಾಬ್ದಾರಿ ಎಂಬ ಮನಸ್ಥಿತಿಗೆ ಬಂದಿದೆ.
ಗ್ರಾಮಗಳು ಅಭಿವೃದ್ಧಿಯಲ್ಲಿ ತೊಡಗಿಕೊಂಡಾಗ, ಆಯಾ ಸಮುದಾಯಗಳು ತಮ್ಮ ಕಸುಬಿನಲ್ಲಿ ತೊಡಗಿಕೊಂಡಾಗ ಅವರವರ ಜೀವನ ಮೇಲೇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸಿ ದುರ್ಗಾಶ್ರೀ, ಬಿಇಒ ಉಮಾದೇವಿ ಸೇರಿದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಸವಲತ್ತುಗಳ ಬಗ್ಗೆ ವಿವರಿಸಿದರು. ಕೃಷಿ, ತೋಟಗಾರಿಕೆ, ವಸತಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.
ಈ ವೇಳೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಒ ವೈಎಚ್. ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಪಲ್ಲಾಗಟ್ಟೆ ಗ್ರಾಮದ ಗ್ರಾಮಸ್ಥರ ಎರಡು ಬೇಡಿಕಗಳಾದ ದಿನದ 24 ಗಂಟೆ ಆರೋಗ್ಯ ಸೇವೆಯ ಬಗ್ಗೆ ಡಿಸಿ ಶಿವನಾಂದ್ ಕಪಶಿ ಅವರು ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿ ಸಿಬ್ಬಂದಿ ಮತ್ತು ಸೇವೆ ಒದಗಿಸುವ ಭರವಸೆ ನೀಡಿದರು. ಜೊತೆಗೆ ವಿದ್ಯಾರ್ಥಿಗಳ ಬೇಡಿಕೆಯಾದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು ಶ್ಲಾಘಿಸಿದರು.
ಎತ್ತಿನ ಗಾಡಿಯಲ್ಲಿ ಡಿಸಿ ಮೆರವಣಿಗೆ!
ಗ್ರಾಮವಾಸ್ತವ್ಯಕ್ಕೆ ಬಂದ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಅವರನ್ನು ಪಲ್ಲಾಗಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಎತ್ತಿನ ಬಂಡಿಗಳನ್ನು ಶೃಂಗಾರಗೊಳಿಸಿ ಡೊಳ್ಳು, ಡ್ರಮ್‍ಸೆಟ್, ಮೇಳವಾದ್ಯಗಳ ಮೂಲಕ ಊರುತುಂಬಾ ಮೆರವಣಿಗೆ ಮಾಡಿದರು.