ಸುದ್ದಿವಿಜಯ, ಜಗಳೂರು: ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಮುಂಜಾಗ್ರತ ಚಿಕಿತ್ಸೆಗಳನ್ನು ನೀಡಬೇಕು, ಮೃತಪಟ್ಟ ದನಗಳಿಗೆ ಶೀಘ್ರವೇ ಪರಿಹಾರ ಕೊಡಿಸಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ಜಗಳೂರು ತಾಲೂಕಿನಲ್ಲಿ ಹಸು, ಎತ್ತುಗಳು ಹೆಚ್ಚು ಸಾಯುತ್ತಿರುವುದು ರೈತರಿಗೆ ನೋವುಂಟಾಗಿದೆ. ಇದಕ್ಕೆ ಬೇಕಾದ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಹಾಕಿ ಪ್ರಾಣಿ ಉಳಿಸಿ, ಸಮರ್ಪಕವಾಗಿ ಲಸಿಕೆ ವಿತರಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸೂಚನೆ ನೀಡಲಾಗುವುದು, ರೈತರ ಭಯ ಪಡುವುದು ಬೇಡ ಸರಕಾರದಿಂದ ಸಿಗಬೇಕಾದ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗಗಳಲ್ಲಿ ಜಾನುವಾರುಗಳ ಸಾಕಾಣಿಕ ತುಂಬ ಕಡಿಮೆಯಾಗಿದೆ ಆದರೆ ಇದೀಗ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗದಿಂದ ಮತ್ತಷ್ಟು ಸಾಯುತ್ತಿರುವುದು ವಿಷಾಧಕರವಾಗಿದೆ. ತಾಲೂಕಿನಲ್ಲಿ ಪಶು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಚುರುಕಾಗಿ ಕೆಲಸ ಮಾಡುತ್ತಿಲ್ಲ ಎಂದು ಬಸವನಕೋಟೆ ಗ್ರಾಮದ ರೈತ ವಿಜಯ್‍ಕುಮಾರ್ ದೂರಿದರು.
ಅಧಿಕಾರಿಗಳು ತಮ್ಮ ಕೆಲಸಗಳನ್ನು ಶ್ರದ್ದೇ ಭಕ್ತಿಯಿಂದ ಅಂದಿನ ಕೆಲಸ ಮಾಡಿದರೆ ಯಾವುದು ಬಾಕಿ ಉಳಿಯುವುದಿಲ್ಲ, ಜನರು ಅಲೆದಾಡುವುದಿಲ್ಲ. ತಾವೂ ಮಾಡುವ ಸಣ್ಣ ನಿರ್ಲಕ್ಷದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಇನ್ನು ಮುಂದೆ ಯಾವುದೇ ದೂರಗಳು ಬಂದರೆ ಅವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅತಿಯಾದ ಮಳೆಗೆ ಟೋಮ್ಯಾಟೋ ಬೆಳೆಗಳೆಲ್ಲಾ ಹಾನಿಯಾಗಿ ಲಕ್ಷಾಂತರ ರೂಗಳು ನಷ್ಟವಾಗಿದೆ, ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರಥ ಅನೀಲ್ ಮನವಿ ಮಾಡಿದರು. ಟೊಮ್ಯಾಟೋ ಬೆಳೆಗೆ ಪರಿಹಾರವಿದೆ ಈ ಬಗ್ಗೆ ವರದಿ ಪಡೆದು ಕಳಿಸಿಕೊಡಿ ಎಂದು ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲೆಮಾರಿ ಜನಾಂಗಕ್ಕೆ ನಿವೇಶನ ಕೊಡಿ:
ಸುಮಾರು 40 ವರ್ಷಗಳಿಂದಲೂ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಪಟ್ಟಣದ ವಿವಿಧ ಕಡೆಗಳಲ್ಲಿ ಗುಡಾರಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ, ಈ ಹಿಂದೆ 41 ಜನರಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿತ್ತು.
ಆದರೆ ಕೊನೆ ಗಳಿಗೆಯಲ್ಲಿ ಆ ಜಾಗವನ್ನು ಮತ್ತೊಬ್ಬರಿಗೆ ನೀಡಿದ್ದರಿಂದ ನಾವೆಲ್ಲರು ವಂಚಿತರಾಗಿದ್ದೇವೆ ಆದ್ದರಿಂದ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಿ ಎಂದು ಸಂಘದ ಅಧ್ಯಕ್ಷ tಕುರಿ ಜಯ್ಯಣ್ಣ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಈ ಬಗ್ಗೆ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು, ಪಟ್ಟಣದಲ್ಲಿ ಸರ್ಕಾರಿ ಜಾಗವೇನಾದರೂ ಇದ್ದರೆ ಅಥವಾ ಖರೀದಿ ಮಾಡಲು ಅವಕಾಶವಿದ್ದರೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಡಿಸಿ ಆಸ್ಪ್ರತ್ರೆ ರೌಂಡ್ಸ್:
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಎಲ್ಲಾ ವಾರ್ಡ್‍ಗಳಿಗೂ ಒಮ್ಮೆ ರೌಂಡ್ಸ್ ಹಾಕಿದರು. ನಂತರ ಹಾಸಿಗೆಯಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ರೋಗಿಗಳ ಬಗ್ಗೆ ನಿಗಾವಹಿಸಬೇಕು, ಸಾಧ್ಯವಾದಷ್ಟು ಔಷಧಿಗಳನ್ನು ಒಳಗೆ ಕೊಡುವ ವ್ಯವಸ್ಥೆ ಮಾಡಬೇಕು, ಖಾಸಗಿ ಅಂಗಡಿಗಳಲ್ಲು ಬೆಲೆ ದುಬಾರಿಯಾಗುವುದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ವೈದ್ಯಾಧಿಕಾರಿ ಡಾ. ನೀರಜ್‍ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್‍ಕುಮಾರ್, ಉಪ ತಹಸೀಲ್ದಾರ್ ಮಂಜಾನಂದ, ತಾ.ಪಂ ಇಒ ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಬಿಇಒ ಉಮಾದೇವಿ ಸೇರಿದಂತೆ ಮತ್ತಿತರಿದ್ದರು.