ಸುದ್ದಿವಿಜಯ, ಜಗಳೂರು: ಐದು ವರ್ಷಗಳಿಂದ ಮಲಗಿದ್ದಲ್ಲಿಯೇ ಮಲಗಿ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ವಿಕಲಾಂಗ ಚೇತನ ವ್ಯಕ್ತಿಯ ಮನೆಗೆ ಮಂಗಳವಾರ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸರಕಾರದ ನೆರವು ನೀಡಿದ್ದಕ್ಕೆ ಇಡೀ ಗ್ರಾಮವೇ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಗಳೂರು ತಾಲೂಕಿನ ಜ್ಯೋತಿಪುರ ಗ್ರಾಮದ 30 ವರ್ಷದ ಯುವಕ ಸತೀಶ್ ನಾಯ್ಕ ಮನೆಗೆ ಡಿಸಿ ಭೇಟಿ ನೀಡಿ ಅಂಗವಿಕಲ ಪೋಷಣ ವೇತನ ಮಂಜೂರಾತಿ ಆದೇಶ ಪತ್ರ ಮತ್ತು ಆಧಾರ್ ಕಾರ್ಡ್ ನೀಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸೋರುತ್ತಿರುವ ಮನೆಯಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆ ವಿಕಲಾಂಗ ಚೇತನ ಮಗನ ಆರೋಗ್ಯ ತೋರಿಸಲು ಹಣವಿಲ್ಲದೇ ಒದ್ದಾಡುತ್ತಿದ್ದ ಪೋಷಕರಿಗೆ ಮಗ ಭಾರವಾಗಿದ್ದಾನೆ. ಇತ್ತ ಕಳೆದ 5 ವರ್ಷಗಳಿಂದ ಮಾಶಾಸನ ಬಂದಿರಲಿಲ್ಲ.
ಕಾರಣ ಸತೀಶ್ ನಾಯ್ಕ್ ಅವರ ಬೆರಳಿನ ರೇಖೆಗಳು ಸವೆದಿದ್ದವು, ಆಧಾರ್ ಇಲ್ಲದ ಕಾರಣ ಯಾವುದೇ ಸರಕಾದ ಸೌಲಭ್ಯಗಳು ಸಿಗದೇ ವಂಚಿತರಾಗಿ ಮಲಗಿದ್ದಲಿಯೇ ಮಲಗಿ ಸೊರಗಿದ ಜೀವಕ್ಕೆ ಡಿಸಿ ನೆರವಿನ ಹಸ್ತ ಚಾಚಿದರು.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಜ್ಯೋತಿಪುರ ಗ್ರಾಮದ ಸತೀಶ್ ನಾಯ್ಕ್ ಅವರ ಕುಟುಂಬ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು 5 ವರ್ಷಗಳಿಂದ ಸರಕಾರದ ಪೋಷಣಾ ವೇತನ ಬಾರದ ಬಗ್ಗೆ ಮನವಿ ಸಲ್ಲಿಸಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಜತೆ ಮಾತನಾಡಿ ಕೇವಲ ಒಂದೇ ವಾರದಲ್ಲಿ ಆಧಾರ್ ಮತ್ತು ವೇತನ ಮಂಜೂರಾತಿ ಆದೇಶ ಪತ್ರ ಸಹಿತ ಮಂಗಳವಾರ ಜ್ಯೋತಿಪುರದ ಸತೀಶ್‍ನಾಯ್ಕ್ ಮನೆಗೆ ತಲುಪಿಸಿ ಜನಸ್ನೇಹಿ ಜಿಲ್ಲಾಧಿಕಾರಿ ಎನ್ನಿಸಿಕೊಂಡರು.
ದಲಿತರ ಮನೆಯಲ್ಲಿ ಚಹ ಸೇವಿಸಿದ ಡಿಸಿ:
ಜಿಲ್ಲಾಧಿಕಾರಿಗಳು ದಲಿತ ಕೇರಿಗೆ ಬಂದು ಸರಕಾರದ ನೆರವು ನೀಡಿದ್ದಕ್ಕೆ ಸತೀಶ್‍ನಾಯ್ಕ್ ಕುಟುಂಬದವರು ಚಹ ತಯಾರಿಸಿದರು. ಜಿಲ್ಲಾಧಿಕಾರಿ ಎನ್ನುವ ಅಹಂ ತೋರದೇ ಮನೆಯ ಮುಂದಿನ ಅಂಗಳದಲ್ಲಿ ಕುಳಿತು ಚಹ ಕುಡಿದಿದ್ದು ವಿಶೇಷವಾಗಿತ್ತು.
ಅಧಿಕಾರಿಗಳಿಗೂ ಎಚ್ಚರಿಕೆ :
ಪ್ರತಿ ಮಂಗಳವಾರ ಜಿಲ್ಲೆಯ ಯಾವುದಾದರೂ ಒಂದು ತಾಲೂಕು ಕಚೇರಿಗೆ ಭೇಟಿ ನೀಡುವ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಶಿವನಾಂದ್ ಕಪಾಶಿ ಅವರು ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆಗಳು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವ್ಯವಸ್ಥೆ, ಆರೋಗ್ಯ ಇಲಾಖೆಯ ಸಮಸ್ಯೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ, ಮೀನುಗಾರಿ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅವರು, ತಕ್ಷಣವೇ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಎಂದು ಎಚ್ಚರಿಕೆ ನೀಡಿದರು.
ಅಹವಾಲು ಸ್ವೀಕಾರ:
ರೈತ ಸಂಘದ ನಾಯಕರು, ಮನೆ ನಿರ್ಮಾಣ, ಜಮೀನು ವ್ಯಾಜ್ಯ, ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣ, ಬಗರ್ ಹುಕ್ಕುಂ ಅರ್ಜಿ ಸೇರಿದಂತೆ 20ಕ್ಕೂ ಹೆಚ್ಚು ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲೇ ಸಮಸ್ಯೆಗಳ ಪರಿಹಾರಕ್ಕೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕಂದಾಯ ಅಧಿಕಾರಿ ಕುಬೇರ್‍ನಾಯ್ಕ್, ಬಿಇಒ ಉಮಾದೇವಿ, ಅಧಿಕಾರಿಗಳಾದ ಮಿಥುನ್‍ಕಿಮಾವತ್, ವೆಂಕಟೇಶ್‍ಮೂರ್ತಿ ಸೇರಿದಂತೆ ಅನೇಕು ಉಪಸ್ಥಿತರಿದ್ದರು.