ಸುದ್ದಿವಿಜಯ,ಜಗಳೂರು: ನೇತ್ರ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಹೇಳಿದರು.
ಇಲ್ಲಿನ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಆರೋಗ್ಯಧಿಕಾರಿ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಟಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ತಂತ್ರಜ್ಞಾನ ವಿಶಿಷ್ಟವಾಗಿ ಬೆಳೆದಿರುವುದರಿಂದ ಒಬ್ಬರು ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯವಾಗುತ್ತದೆ. ದೇಶದಲ್ಲಿ 3 -4 ಕೋಟಿ ಜನರಿಗೆ ಅಂಧತ್ವ ಇದೆ. ಆದ್ದರಿಂದ ದಾನಿಗಳ ಸಂಖ್ಯೆ ಹೆಚ್ಚಬೇಕಿದೆ. ಮರಣ ಹೊಂದಿದ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿ ಅವರಿಗೆ ಜಗತ್ತು ನೋಡಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಇದನ್ನು ಆಂದೋಲನದಂತೆ ನಡೆಸಿ ನೇತ್ರದಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ವೈದ್ಯೆ ಸವಿತಾ ಮಾತನಾಡಿ, ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆ ಇರುತ್ತದೆ. ಯಾವುದೇ ಜಾತಿ, ಧರ್ಮ, ಹೆಣ್ಣು-ಗಂಡು ಭೇಧವಿಲ್ಲದೆ ಎಲ್ಲರೂ ಸ್ವಯಂ ಪ್ರೇರಣೆ ಯಿಂದ ರಕ್ತದಾನ ಮಾಡಿ ಜೀವನ್ಮರಣದ ನಡುವೆ ಹೋರಾಡುವವರಿಗೆ ಜೀವದಾನ ಮಾಡಬೇಕು ಎಂದರು.ಈ ಸಂಧರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಸವರಾಜ್, ಪ್ರಾಧ್ಯಾಪಕ ದೊಡ್ಡಮನಿ ಲೋಕರಾಜ್, ಸರ್ಕಾರಿ ಆಸ್ಪತ್ರೆ ನೇತ್ರ ಸಹಾಯಕ ಅಧಿಕಾರಿ ಪರಮೇಶ್ವರಪ್ಪ ಸೇರಿದಂತೆ ಮತ್ತಿತರಿದ್ದರು.