ಸುದ್ದಿವಿಜಯ,ಜಗಳೂರು: ಪಾಯ ತೆಗೆಯುವಾಗ ನಿಧಿಸಿಕ್ಕಿದೆ ಎಂದು ನಂಬಿಸಿ ರಾಯಚೂರು ಮೂಲಕ ಕಾಂಟ್ರ್ಯಾಕ್ಟರ್ ವೀರಣ್ಣ ಅವರಿಗೆ ಆರು ಲಕ್ಷ ರೂ. ವಂಚಿಸಿದ್ದ ಆರೋಪಿಗಳನ್ನು ಜಗಳೂರು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ ಎಂದು ಐಪಿಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ಮನೆ ಕಟ್ಟಲು ಪಾಯತೆಗೆಯುವಾಗ ನಮಗೆ ಪುರಾತನ ಕಾಲದ ರಾಣಿ ವಿಕ್ಟೋರಿಯಾ ಮುದ್ರೆಯಿರುವ ಅಪಾರ ಪ್ರಮಾಣದ ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ರಾಯಚೂರು ಮೂಲಕ ಕಾಂಟ್ರ್ಯಾಕ್ಟರ್‍ಗೆ ವಂಚಿಸಿ ಆರು ಲಕ್ಷ ರೂ ಪಂಗನಾಮ ಹಾಕಿದ್ದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸಾತ್ಪಾಡಿ ಪ್ರಕಾಶ್(30) ಮತ್ತು ಅದೇ ತಾಲೂಕಿನ ಕನ್ನನಾಯಕನಹಳ್ಳಿ ಅಗ್ರಹಾರದ ಹನುಮಂತ ಅಲಿಯಾಸ್ ಕೊರಚರ ಹನುಮಂತ(52) ಅವರನ್ನು ಬಂಧಿಸಿ ಜಗಳೂರು ಪಟ್ಟಣದ ನ್ಯಾಯಾಧೀಶರ ಮುಂದೆ ಶನಿವಾರ ಹಾಜರು ಪಡಿಸಲಾಗಿದೆ ಎಂದು ತಿಳಿಸಿದರು.
ಘಟನೆಯ ವಿವರ:
ಈ ಹಿಂದೆ ರಾಯಚೂರು ಮೂಲಕ ಕಾಂಟ್ರ್ಯಾಕ್ಟರ್ ವೀರಣ್ಣ ಅವರ ಬಳಿ ಕೂಲಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿಗಳು ಗ್ರಾಮಕ್ಕೆ ವಾಪಾಸ್ ಬಂದು ವೀರಣ್ಣ ಅವರಿಗೆ ಕರೆ ಮಾಡುತ್ತಾರೆ. ಯಾವುದೋ ಗ್ರಾಮದಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ರಾಣಿವಿಕ್ಟೋರಿಯಾ ಮುದ್ರೆ ಇರುವ ಅಪಾರ ಪ್ರಮಾಣದ ನಾಣ್ಯಗಳು ಸಿಕ್ಕಿವೆ.
ನಿಮಗೆ ಅರ್ಧ ಬೆಲೆಗೆ ಕೊಡುತ್ತೇವೆ ಎಂದು ಅಸಲಿ ಬಂಗಾರದ ರಾಣಿ ವಿಕ್ಟೋರಿಯಾ ಮುದ್ರೆ ಇರುವ ಒಂದು ನಾಣ್ಯವನ್ನು ವೀರನ್ಣ ಅವರಿಗೆ ಕಳೆದ ತಿಂಗಳು 29 ರಂದು ನೀಡಿ ನಂಬಿಸಿದ್ದರು. ಸಿಕ್ಕಿರುವುದು ನಕಲಿ ಅಲ್ಲ ಅಸಲಿ ಎಂದು ಮೋಸ ಹೋದ ಅವರು, ಆರೋಪಿಗಳ ಬಳಿ ಇರುವ ಅಷ್ಟೂ ನಾಣ್ಯಗಳನ್ನು 6 ಲಕ್ಷ ರೂ ಕೊಟ್ಟು ಖರೀದಿಸಿದ್ದರು. ನಂತರ ಪರೀಕ್ಷಿಸಿದಾಗ ಅವುಗಳೆಲ್ಲ ಫೇಕ್ ಎಂದು ಗೊತ್ತಾಗುತ್ತಿದ್ದಂತೆ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದರು.
ಕೂಡಲೇ ದಾವಣಗೆರೆ ಗ್ರಾಮಾಂತರ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಕ್ರಿವಾಲ್ ಅವರು ಜಗಳೂರು ಪಟ್ಟಣದ ಪಿಎಸ್‍ಐ ಸಿ.ಎನ್.ಬಸವರಾಜ್, ಸಿಬ್ಬಂದಿಗಳಾದ ಎಎಸ್‍ಐ ಯಾಸೀನುಲ್ಲಾ, ಎನ್.ಸಿ.ರಾಜಪ್ಪ, ಸೈಯದ್ ಗಫಾರ್, ನಾಗರಾಜಯ್ಯ, ಹನುಮಂತ ಕವಾಡಿ, ವಸಂತರೆಡ್ಡಿ ಹಾಗೂ ನೂರುಲ್ಲಾ ಅವರನ್ನು ಒಳಗೊಂಡ ತಂಡ ರಚಿಸಿ ನಕಲಿ ಬಂಗಾರ ಮಾರಾಟದ ಆರೋಪಿಗಳಾದ ಹನುಮಂತ, ಸಾತ್ಪಾಡಿ ಪ್ರಕಾಶ್ ಅವರನ್ನು ಆ.27ರ ಶನಿವಾರ ಬಂಧಿಸಿದ್ದಾರೆ. ಇವರ ಕಾರ್ಯಕ್ಕೆ ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ.ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಚ್ಚರವಾಗಿರಬೇಕು ಸಾರ್ವಜನಿಕರು: ಕನ್ನಿಕಾ ಸಕ್ರಿವಾಲ್:
“ನಕಲಿ ಬಂಗಾರವನ್ನು ಮಾರಾಟ ಮಾಡುತ್ತಿದ್ದಂತೆ ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಬದಲಿಸುತ್ತಿದ್ದರು, ತಾವು ಬಳಸುತ್ತಿದ್ದ ವಾಹನಗಳ ನಂಬರ್ ಪ್ಲೇಟ್ ಬದಲಿಸತ್ತಿದ್ದರು. ಇಂತಹ ವ್ಯಕ್ತಿಗಳು ಸಮಾಜದಲ್ಲಿ ಇನ್ನು ಇರಬಹುದು. ಸಾರ್ವಜನಿಕರು ಮೋಸ ಹೋಗಬಾರದು. ಅಂತಹ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಎಚ್ಚರವಾಗಿರಬೇಕು ಎಂದು ಐಪಿಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದರು”.