ಸುದ್ದಿವಿಜಯ, ಜಗಳೂರು : ಅತಿವೃಷ್ಠಿಯಿಂದ ಮೆಕ್ಕೆಜೋಳ ಹಾನಿ ಹಾಗೂ ಸಾಲದ ಬಾಧೆ ತಾಳಲಾರದೇ ರೈತನೊರ್ವ ವಿಷ ಪದಾರ್ಥ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜ್(45) ಮೃತ ರೈತ. ಈತನಿಗೆ ಕೆಳಗೋಟೆಯಲ್ಲಿ 5.5 ಎಕರೆ ಜಮೀನಿದೆ. ಇದನ್ನೆ ನಂಬಿಕೊಂಡು ಬದುಕುತ್ತಿದ್ದ. ಈ ವರ್ಷ ಮೆಕ್ಕೆಜೋಳ ಬೆಳೆದಿದ್ದ,
ಸಾಕಷ್ಟು ಸುರಿದ ಮಳೆಯಿಂದ ಅತಿವೃಷ್ಠಿಯಾಗಿ ಮೆಕ್ಕೆಜೋಳ ಸಂಪೂರ್ಣ ಜಲಾವೃತಗೊಂಡು ಬೆಳೆ ಕೈಗೆ ಸಿಗದೇ ಹಾನಿಯಾಗಿದೆ. ಬಿತ್ತನೆಗಾಗಿ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಲಕ್ಷಾಂತರ ರೂಗಳನ್ನು ಸಾಲ ಮಾಡಿದ್ದ ಆದರೆ ಮೆಕ್ಕೆಜೋಳ ಕೈಕೊಟ್ಟಿದ್ದರಿಂದ ಮನನೊಂದುಕೊಂಡಿದ್ದ ಎನ್ನಲಾಗಿದೆ.
ಹೊಸಕೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ, ಸೊಸೈಟಿಯಲ್ಲಿ 50 ಸಾವಿರ ಹಾಗೂ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು 1.50 ಲಕ್ಷ ಕೈಗಡ ಸಾಲ ಸೇರಿದಂತೆ 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದನು. ಅತ್ತ ಬೆಳೆಯೂ ಸಿಗದೇ ಇತ್ತ ಸಾಲ ಮತ್ತು ಬಡ್ಡಿ ಕಟ್ಟಲಾಗಿದೆ ಜಿಗುಪ್ಸೆಗೊಂಡ ನಾಗರಾಜ್ ಮಂಗಳವಾರ ಮದ್ಯಾಹ್ನ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದಾನೆ. ತಂದೆಯನ್ನು ಕಳೆದುಕೊಂಡು ಕುಟುಂಬ ರೋಧಿಸುತ್ತಿದೆ.