ಸುದ್ದಿವಿಜಯ,ಜಗಳೂರು: ತಾಲೂಕಿನ ದೇವೀಕೆರೆ ಗ್ರಾಮದ ರೈತ ಡಿ.ಎಂ.ಶಿವಪ್ರಕಾಶಯ್ಯ ಗುರುವಾರ ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತನ ಸಾವಿಗೆ ಬಿಳಿಚೋಡು ಎಸ್‍ಒ ಆಂಜಿನಪ್ಪ ಮತ್ತು ಬೆಸ್ಕಾಂ ಅಧಿಕಾರಿಗಳೆ ನೇರ ಕಾರಣ ಎಂದು ಸಂಬಂಧಿಕರು ಹಾಗೂ ಗ್ರಾಮಸ್ಥರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ವಿವರ: ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮೆಕ್ಕೆಜೋಳದ ಬೆಳೆಗೆ ಕಬ್ಬಿಣದ ಸ್ಪಿಂಕ್ಲರ್ ಪೈಪ್ ಎತ್ತಿ ಸ್ಥಳಾಂತರಿಸುವಾಗ ಜೋತು ಬಿದ್ದಿದ್ದ ಲೈಲ್‍ಗೆ ಕಬ್ಬಿಣದ ಪೈಪ್ ತಗುಲಿ ರೈತ ಮೃತಪಟ್ಟಿದ್ದಾರೆ. ಪವರ್ ಲೈನ್ ಕೈಗೆಟುಕುಷ್ಟು ನೇತಾಡುತ್ತಿವೆ ಎಂದು ಬಿಳಿಚೋಡು ಬೆಸ್ಕಾಂ ಅಧಿಕಾರಿಗಳಿಗೆ ಮತ್ತು ಲೈನ್ ಮನ್‍ಗಳಿಗೆ ಮೂರು ಆಮನವಿ ಮಾಡಿದ್ದರೂ ಸಹ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ತೋರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೃತ ರೈತನ ಮಗ ಪ್ರಮೋದ್ ಆರೋಪಿಸಿದ್ದಾರೆ.
ಮೂರು ತಿಂಗಳಲ್ಲಿ ಮೂರು ಬಲಿ:
ಜಗಳೂರು ತಾಲೂಕಿನ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂರು ಜನ ರೈತರು ಬಲಿಯಾಗಿದ್ದಾರೆ. ಇತ್ತೀಚೆಗೆ ಬಿಸ್ತುವಳ್ಳಿ ಗ್ರಾಮದ ರೈತ ನಾಗರಾಜ್, ಕಳೆದ 20 ದಿನಗಳ ಹಿಂದೆ ಜಮ್ಮಾಪುರ ಗ್ರಾಮದ ಯುವಕ ದಾನಪ್ಪ ಹಾಗೂ ಹಾಲೇಕಲ್ಲು ಗ್ರಾಮದ ರೈತನ ಎರಡು ಎತ್ತುಗಳು ಹಾಗೂ ದೇವೀಕೆರೆ ಶಿವಪ್ರಕಾಶಯ್ಯ ಸೇರಿ ಒಟ್ಟು ನಾಲ್ಕು ಜೀವಗಳು ಬಲಿಯಾಗಿದ್ದರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಇನ್ನು ಎಷ್ಟು ಜೀವಗಳು ಬಲಿಯಾಗಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೊರಟಿಕೆರೆ ಧನಂಜಯ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಈ ರೀತಿ ಘಟನೆ ನಡೆಯಬಾರದಿತ್ತು. ಸರಕಾರದಿಂದ ಬರುವ ಪರಿಹಾರವನ್ನು ರೈತ ಕುಟುಂಬಕ್ಕೆ ನೀಡುತ್ತೇವೆ ಎಂದು ಜಗಳೂರು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಹಾಗೂ ಎಸ್‍ಒ ಆಂಜಿನಪ್ಪ ಪ್ರತಿಕ್ರಿಯೆ ನೀಡಿದರು. ಸ್ಥಳಕ್ಕೆ ಬಿಳಿಚೋಡು ಠಾಣೆ ಸಿಪಿಐ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.