ಸುದ್ದಿವಿಜಯ, ಜಗಳೂರು: ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಾವಣಗೆರೆಯ ವಿಬಿಪಿ ಫೌಂಡೇಶನ್ ಸಂಸ್ಥಾಪಕ ಶಿವಕುಮಾರ್ ಮೇಗಳಮನಿ ಅವರು ದಾವಣಗೆರೆಯಿಂದ ಮಂತ್ರಾಲಯಕ್ಕೆ ಏಕಾಂಗಿಯಾಗಿ ಪಾದಯಾತ್ರೆ ಹೊರಟಿದ್ದಾರೆ.
ಏಡ್ಸ್ ಸೋಂಕು ಭಯಾನಕ ರೋಗವಲ್ಲ. ಏನೂ ಅರಿಯದ ಏಡ್ಸ್ ಸೋಂಕಿತ ಮಕ್ಕಳನ್ನು ಸಮಾಜ ನೋಡುವ ಬಗೆ ತೀರಾ ಅಮಾನವೀಯ. ಸಮಸ್ಯೆಗಳ ಸುಳಿಯಲ್ಲಿ ಬೆಂದ ತನ್ನ ತಪ್ಪಿನಿಂದ ಅಥವಾ ಬೇರೆಯವರಿಂದಾದ ತಪ್ಪಿಗೆ ಶೋಷಣೆಗೊಳಗಾದ ಮಕ್ಕಳನ್ನು ನಮ್ಮ ಸಮಾಜ ತೀರಾ ಅಮಾನವೀಯವಾಗಿ ಅಸ್ಪುಶ್ಯರಂತೆ ನಡೆದುಕೊಳ್ಳುತ್ತಿದೆ. ಕಳಂಕ ರಹಿತ ಮತ್ತು ತಾರತಮ್ಯವಿಲ್ಲದೇ ಹೆಚ್ಚಿನ ಸೇವೆಗಳನ್ನು ಕಲ್ಪಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.
ಹೀಗಾಗಿ ವಿಶ್ವಸಂಸ್ಥೆಯೇ ಪ್ರತಿವರ್ಷ ಡಿಸೆಂಬರ್1 ರಂದು ವಿಶ್ವ ಏಡ್ಸ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ವಿಬಿಪಿ ಫೌಂಡೇಶನ್ ನಾಲ್ಕು ವರ್ಷಗಳಿಂದ ಏಡ್ಸ್ ಸೋಂಕಿತ ಮಕ್ಕಳಿಗೆ, ಆತ್ಮಸ್ಥೈರ್ಯ, ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಿನ್ನೆಲೆಯಲ್ಲಿ 400 ಕಿ.ಮೀ ಮಂತ್ರಾಲಯದ ವರೆಗೂ ಪಾದಯಾತ್ರೆ ಮಾಡುತ್ತಿದ್ದೇನೆ. ಯುವಕರನ್ನು ಎಚ್‍ಐವಿ ಸೋಂಕಿನಿಂದ ಜಾಗೃತಿ ಮೂಡಿಸುವ ಉದ್ದೇಶದಿಂದ 15 ದಿನಗಳ ಒಳಗೆ ಪ್ರತಿನಿತ್ಯ 25 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದೇನೆ. ದಾರಿಯಲ್ಲಿ ಸಿಗುವ ಪೇಟೆ, ಪಟ್ಟಣ, ಹಳ್ಳಿಹಳ್ಳಿಗಳಲ್ಲಿ ಬ್ಯಾನರ್ ಹಿಡಿದು ಏಡ್ಸ್ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಶಿವಕುಮಾರ್ ಮೇಗಳಮನಿ ಜಗಳೂರಿನಲ್ಲಿ ಸುದ್ದಿವಿಜಯ ವೆಬ್ ನ್ಯೂಸ್‍ಗೆ ಪ್ರತಿಕ್ರಿಯೆ ನೀಡಿದರು.