ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ನಮ್ಮ ಸಂವಿಧಾನ ವಿಶ್ವದ ಬೇರೆ ಬೇರೆ ಪ್ರಜಾಪ್ರಭತ್ವ ದೇಶಗಳ ಸಂವಿಧಾನಕ್ಕಿಂತ ಸದೃಢವಾಗಿದೆ. ನಮ್ಮ ದೇಶದ ರಕ್ಷಣೆ ಮತ್ತು ಜನರ ಆತ್ಮದಂತಿರುವ ಸಂವಿಧಾನವನ್ನು ಕಾಪಾಡುವ ಹೊಣೆ ನಮ್ಮೆಲ್ಲರದ್ದು ಎಂದು ಶಾಸಕ ಎಸ್.ವಿ.ರಾಮಚಂದ್ರ ಕರೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಶುಕ್ರವಾರ ಪಟ್ಟಣದ ಡಾ.ಬಿ.ಆರ್.ಅಂಬೇಡರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಹಾಗೆ ಸುಮ್ಮನೆ ಬಂದಿದ್ದಲ್ಲ. ನಮ್ಮ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಸೇನಾನಿಗಳು ನೆತ್ತರು ಹರಿಸಿದರು.
ಪ್ರಾಣತ್ಯಾಗ ಮಾಡಿದರು. ಅವರ ಹೋರಾಟದ ಫಲ 1947 ಆಗಸ್ಟ್ 15ರಂದು ಮಧ್ಯರಾತ್ರಿ ಸ್ವಾತಂತ್ರ್ಯ ಬಂತು. ತ್ಯಾಗ ಬಲಿದಾನಗಳ ಹೋರಾಟದಿಂದ ನಾವು ಬ್ರಿಟೀಷರ ಆಳ್ವಿಕೆಯಿಂದ ಬಂಧ ಮುಕ್ತರಾಗಿದ್ದೇವೆ.
ದೇಶದ ನಾಗರೀಕರಿಗೆ ನಮ್ಮ ದೇಶದ ಧ್ವಜ ಸಂಹಿತೆ ಬಗ್ಗೆ ಅರಿವು ಮೂಡಿಸುವ ಉದ್ದಶದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಪಂ ಮಟ್ಟದಲ್ಲೂ ಬೈಕ್ ಸವಾರರು ತಮ್ಮ ಬೈಕ್‍ಗಳಿಗೆ ತ್ರಿವರ್ಣ ಧ್ವಜ ಕಟ್ಟಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಿದ್ದಾರೆ ಎಂದರು.
ಮಂಡಲ್ ಬಿಜೆಪಿ ಅಧ್ಯಕ್ಷ ಮಹೇಶ್ ಮಾತನಾಡಿ, ತ್ರಿವರ್ಣ ಧ್ವಜ ಮನೆ ಮನೆಗಳ ಮೇಲೆ ಹಾರಾಡಲಿ ಎಂದು 2ಲಕ್ಷ ಧ್ವಜಗಳನ್ನು ತಯಾರಿಸಿ ಕ್ಷೇತ್ರದ ಕಾರ್ಯಕರ್ತರ ಮನೆಗಳ ಮೇಲೆ ಮೂರು ದಿನಗಳ ಕಾಲ ಹಾರಿಸಲು ಸೂಚನೆ ನೀಡಲಾಗಿದೆ ಎಂದರು.
ಬೈಕ್ ರ್ಯಾಲಿಯಲ್ಲಿ 1000 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ಬಿಜೆಪಿ ಮುಖಂಡರಾದ ಬಿದರಕೆರೆ ರವಿ, ಬಿಸ್ತುವಳ್ಳಿ ಬಾಬು, ಹಾಲೇಕಲ್ಲು ರಾಜೇಶ್, ತೋರಣಗಟ್ಟೆ ಬಾಲಪ್ಪ, ಹನುಮಂತಪ್ಪ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.