ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಚಿಕ್ಕಮಲ್ಲನಹೊಳೆ ಚಂದ್ರಣ್ಣರೆಡ್ಡಿ (92) ಇವರನ್ನು ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್ ಸನ್ಮಾನಿಸಿದರು.
ಹೋರಾಟಗಾರ ಚಂದ್ರಣ್ಣ ರೆಡ್ಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ತುಂಬಿದ್ದು, ದೇಶದಾದ್ಯಂತ ಹಬ್ಬದಂತೆ ಆಚರಣೆ ಮಾಡುತ್ತಿರುವುದು ತುಂಬ ಸಂತಸವಾಗಿದೆ. 1942ರಲ್ಲಿ 12ನೇ ವಯಸ್ಸಿನ ಹುಡುಗನಾಗಿದ್ದಾಗ ಸ್ವಾತಂತ್ರ ಹೋರಾಟವನ್ನು ಹತ್ತಿರದಿಂದ ಕಂಡು ಭಾಗವಹಿಸಿದ್ದೇನೆ.
ಒಮ್ಮೆ ಮೊಣಕಾಲ್ಮೂರಿನಲ್ಲಿ ಬ್ರಿಟಿಷರ ವಿರುದ್ದ ಪ್ರತಿಭಟನೆ ನಡೆಸುವ ವೇಳೆ ಪೊಲೀಸರಿಂದ ಹೊಡೆತ ತಿಂದು ಜೈಲು ಸೇರಿದ್ದೇನೆ ಎಂದು ಹೋರಾಟದ ದಿನಗಳನ್ನು ಮೆಲುಕು ಹಾಕಿದರು.
ತಹಸೀಲ್ದಾರ್ ಸಂತೋಷ್ಕುಮಾರ್ ಮಾತನಾಡಿ, ಆಂಗ್ಲರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಭಾರತೀಯರು ಅನೇಕ ಹೋರಾಟಗಳನ್ನು ರೂಪಿಸಿದರು. ಸ್ವಾತಂತ್ರ ಕಿಚ್ಚಿನಲ್ಲಿ ಚಿಕ್ಕ ಹಳ್ಳಿಯಿಂದ ದಿಲ್ಲಿಯವರೆಗೂ ಲಕ್ಷಾಂತರ ದೇಶಭಕ್ತರು ಪ್ರಾಣ ತ್ಯಾಗ ಮಾಡಿದ್ದಾರೆ.
ಜಗಳೂರು ತಾಲೂಕಿನಲ್ಲಿ ಅನೇಕರು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದಾರೆ, ಬಹುತೇಕರು ಇಹಲೋಕ ತೆಜಿಸಿದ್ದಾರೆ, ಚಿಕ್ಕಮಲ್ಲನಹೊಳೆ ಚಂದ್ರಣ್ಣರೆಡ್ಡಿಯವರು ತುಂಬ ವಯಸ್ಸಾಗಿರುವುದರಿಂದ ವೇದಿಕೆಗೆ ಕರೆದು ಸನ್ಮಾನ ಮಾಡುವುದು ಕಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ತಮ್ಮ ಮನೆಯಲ್ಲಿಯೇ ಗೌರವ ಸಲ್ಲಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಸುಮ್ಮನೆ ಬಂದಿಲ್ಲ. ಇದರ ಹಿಂದೆ ಅನೇಕರು ಜೀವ ತೆತ್ತಿದ್ದಾರೆ. ಮಹಾತ್ಮಗಾಂಧಿ, ಸರ್ದಾರ್ ವಲ್ಲಾಬಾಯ್ ಪಟೇಲ್, ಕಿತ್ತೂರು ರಾಣಿ ಚನ್ನಮ್ಮ ಹೀಗೆ ಅನೇಕ ಮಹಾವೀರರು ಬ್ರಿಟಿಷರ ಗುಂಡೇಟಿಗೆ ರಕ್ತ ಚಲ್ಲಿದ್ದಾರೆ. ಇಂದು ಸ್ವಾತಂತ್ರವಾಗಿ ಜೀವನ ನಡೆಸಲು ಹಿರಿಯರ ಹೋರಾಟದ ಫಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಆರ್ಐ ಕುಬೇಂದ್ರನಾಯ್ಕ, ಶ್ರಿನಿವಾಸ್, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ವೇತ, ಲೋಲಾಕ್ಷಿ, ನಿವೃತ್ತ ಮುಖ್ಯ ಶಿಕ್ಷಕ ಜಿ.ಸಿ ವಾಸುದೇವರೆಡ್ಡಿ ಸೇರಿದಂತೆ ಮತ್ತಿತರಿದ್ದರು.