Suddivijaya|Kannada News|11-04-2023
ಸುದ್ದಿವಿಜಯ,ಜಗಳೂರು:ತಾಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಒಂದು ವಾರದ ಕಾಲ ನಡೆಯುವ ಜಾತ್ರೆ ಹಿನ್ನೆಲೆ ಗ್ರಾಮದಲ್ಲಿ ಜನಸ್ತೋಮ ತುಂಬಿತ್ತು. ಬೆಳಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಮುಂಜಾನೆ ಸ್ವಾಮಿಯ ಮೂರ್ತಿಯನ್ನು ಹೊಳೆಗೆ ಕರೆದೊಯ್ದು ಗಂಗಾಪೂಜೆ, ಮಂಗಳಾರತಿ ಬಸವನ ಉಚ್ಚಯ ನೆರವೇರಿಸಲಾಯಿತು. ನಂತರ ಅಭಿಷೇಕ ನೆರವೇರಿತು.
ಜಮ್ಮಾಪುರ ಗ್ರಾಮದ ಭಕ್ತರು ಪಾದಯಾತ್ರೆಯ ಮೂಲಕ ಕಲ್ಲೇದೇವರಪುರಕ್ಕೆ ತಂದ ಸಜ್ಜೆ ಹೋಳಿಗೆ ಎಡೆ ತಂದು ಅಭಿಷೇಕ, ರುದ್ರಾಭಿಷೇಕ, ಬಾಳೇಭಿಷೇಕ ಮದಲಿಂಗ ಶಾಸ್ತ್ರ ಮತ್ತು ಗಜೋತ್ಸವ, ಕಂಕಣಧಾರಣೆ, ವೃಷಭೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆದವು.
ಸಂಜೆ 4ಕ್ಕೆ ದೇವಸ್ಥಾನದಿಂದ ಕಲ್ಲೇಶ್ವರ ಸ್ವಾಮಿ ಮೂರ್ತಿಯಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ತೇರಿಗೆ ಒಂದು ಬಾರಿ ಪ್ರದಕ್ಷಿಣೆ ಹಾಕಿಸಿ, ಊರು ಹೊರವಲಯದಲ್ಲಿರುವ ಹಳ್ಳಳ್ಳಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ತೇರಿನ ಬಳಿ ಬಂದು ಮತ್ತೊಮ್ಮೆ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು.
ತೇರು ಬೀದಿಯಲ್ಲಿ ಮದ್ಯಾಹ್ನ 3ಗಂಟೆಯಿಂದಲೇ ರಥೋತ್ಸವಕ್ಕಾಗಿ ಜನರು ಬಿಸಿಲನ್ನು ಲೆಕ್ಕಿಸದೇ ಕಾದು ನಿಂತಿದ್ದರು. ಸಂಜೆ 5ಗಂಟೆಗೆ ಕಲ್ಲೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ತೇರಿನ ಸುತ್ತಲು ಮೂರು ಬಾರಿ ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಿ ಕರ್ಪೂರದ ಆರತಿಯನ್ನು ಬೆಳಗಿ ಚಾಲನೆ ನೀಡುತ್ತಿದ್ದಂತೆ ನೆರದಿದ್ದ ಲಕ್ಷಾಂತರ ಭಕ್ತರು ತೇರಿನ ಗಾಲಿಗೆ ತೆಂಗಿನ ಕಾಯಿ ಹೊಡೆದು, ಕಳಸಕ್ಕೆ ಬಾಳೆಹಣ್ಣು ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು. ತೇರು ಸಾಗುತ್ತಿದ್ದಂತೆ ದಾರಿಯುದ್ದಕ್ಕೂ ತಮಟೆ, ಡೊಳ್ಳು, ನಂದಿ ಧ್ವಜ ಕುಣಿತಕ್ಕೆ ಭಕ್ತರ ತಲೆ ಹಾಡಿಸಿದರು.
ಚೈತ್ರ ಮಾಸ ಕೃಷ್ಣ ಪಕ್ಷ ಪಂಚಮಿ ಹುಣ್ಣಿಮೆಯ ಮೂಲ ನಕ್ಷತ್ರದಲ್ಲಿ ನಡೆಯುವ ರಥೋತ್ಸವಕ್ಕೆ ವಾರದಿಂದಲೂ ಗ್ರಾಮದಲ್ಲಿ ಸಕಲ ಸಿದ್ದತೆಗಳು ನಡೆದಿವೆ. ರಥೋತ್ಸವಕ್ಕೆ ಚಾಲನೆ ನೀಡಿ ತೇರು ಮುಂದೆ ಸಾಗುತ್ತಿದ್ದಂತೆ ನೆರದಿದ್ದ ಸಹಸ್ರಾರು ಭಕ್ತರು ಗಾಲಿಗೆ ತೆಂಗಿನಕಾಯಿ ಹೊಡೆದು, ಬಾಳೆ ಎಸೆದು ದೇವರ ಕೃಪೆಗೆ ಪಾತ್ರರಾದರು.
ಏಪ್ರಿಲ್ 12ರಂದು ಸ್ವಾಮಿಯ ಅಡ್ಡಪಲ್ಲಕ್ಕಿ ಮಹೋತ್ಸವ, ರಾತ್ರಿ ಕೋಲಾಟ, ಭಜನೆ, ಹರಿಕಥೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 12ಕ್ಕೆ ಬೆಳಗ್ಗೆ ಓಕಳಿ, ಸಂಜೆ ಗುಡಿತುಂಬಿಸಿ ಜಾತ್ರೆ ತೆರೆ ಕಾಣಲಿದೆ.
ಆಗಮಿಸಿದ ಭಕ್ತರ ದಂಡು:
ಕರೊನಾದಿಂದಾಗಿ ಎರಡ್ಮೂರು ವರ್ಷಗಳಿಂದಲೂ ಜಾತ್ರೆ ಮತ್ತು ರಥೋತ್ಸವ ನಡೆದಿರಲಿಲ್ಲ, ಕಳೆದ ವರ್ಷದಿಂದ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿಯೂ ಯಾವುದೇ ಕರೊನಾ ವೈರಾಣುಗಳ ಅಡ್ಡಿ ಇಲ್ಲಿದೆ ಸುಸೂತ್ರವಾಗಿ ನಡೆಯುತ್ತಿದೆ. ಹಾಗಾಗಿ ಈ ಬಾರಿ ಭಕ್ತರು ದಂಡು ಹೆಚ್ಚಾಗಿತ್ತು. ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಎತ್ತಿನಗಾಡಿ, ಆಟೋ, ಟ್ರ್ಯಾಕ್ಟರ್, ಕಾರು, ಬೈಕ್‌ಗಳ ಮೂಲಕ ಆಗಮಿಸಿದರು. ತೋರಣಗಟ್ಟೆ ರಸ್ತೆ, ದೊಣೆಹಳ್ಳಿ, ಚಳ್ಳಕೆರೆ ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿತು. ಒಂದು ಕಿ.ಮೀ ದೂರದವರೆಗೂ ವಾಹನಗಳ ನಿಲುಗಡೆಯಾಗಿದ್ದವು.
ಬಿಸಿಲಿಗೆ ಹೈರಾಣು:
ಒಂದೆಡೆ ಜಾತ್ರೆ ಮತ್ತೊಂದೆಡೆ ಬಿಸಿಲಿನ ಹೊಡೆತಕ್ಕೆ ಜನರು ಹೈರಾಣಾದರು. ಬೆಳಗ್ಗೆಯಿಂದಲೇ ಬಿಸಿಲಿನ ಝಳ ಹೆಚ್ಚಾಗಿತ್ತು. ಮದ್ಯಾಹ್ನವಂತೂ ಎರಡುಪಟ್ಟು ಬಿಸಲು ಏರಿತ್ತು. ಭಕ್ತರು ಬಿಸಿಲು ಲೆಕ್ಕಿಸದೇ ರಥೋತ್ಸವ ಮುಗಿಯುವವರೆಗೂ ಅಲ್ಲಿಂದ ಕಾಲು ತೆಗೆಯಲಿಲ್ಲ. ಇದರ ನಡುವೆ ಪೊಲಿಸ್ ಸಿಬ್ಬಂದಿಗಳು ಜನರನ್ನು ನಿಯಂತ್ರಿಸುವಲ್ಲಿ ಸಾಕಾಗಿ ಹೋದರು.
ಈ ಸಂದರ್ಭದಲ್ಲಿ ಶಾಸಕ ಎಸ್.ವಿ ರಾಮಚಂದ್ರ, ಮಾಜಿ ಶಾಸಕ ಎಚ್.ಪಿ ರಾಜೇಶ್, ಕಾಂಗ್ರೆಸ್ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕಾನನಕಟ್ಟೆ ಪ್ರಭು ಸೇರಿದಂತೆ ಮತ್ತಿತರಿದ್ದರು.
ಜಗಳೂರು ಕಲ್ಲೇಶ್ವರಸ್ವಾಮಿ ಜಾತ್ರೆ, ಕಲ್ಲೇದೇವರಪುರ ರಥೋತ್ಸವ, ಕಲ್ಲೇಶ್ವರ ಅದ್ದೂರಿ ಜಾತ್ರೆ.