ಸುದ್ದಿವಿಜಯ, ಜಗಳೂರು: ಮಾದಿಗ ಮತ್ತುಛಲವಾದಿ ಸಮಾಜದ ವತಿಯಿಂದ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಎಲ್ಲ ದಲಿತ ಮುಖಂಡರು ಸೇರಿ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಶಾಸಕರ ಕಚೇರಿಯಲ್ಲಿ ಶಾಂತಯುತವಾಗಿ ಮನವಿ ನೀಡುತ್ತಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಿ.ಎಚ್.ಶಂಭುಲಿಂಗಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಾದಿಗ ಹಾಗೂ ಛಲವಾದಿ ಸಮಾಜದ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪರಿಶಿಷ್ಟ ಜಾತಿ ಒಳ ಮೀಸಲು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೆಡ್ಯೂಲ್ 9ರಲ್ಲಿ ಸೇರಿಸಿ ತಕ್ಷಣ ಕೇಂದ್ರ ಸರಕಾರಕ್ಕೆ ಸಲ್ಲಿಸಲು ಒತ್ತಡ ತರಬೇಕೆಂದು ಮನವಿ ಮಾಡಲಾಗುವುದು. ಸಮಾಜದ ಬಗ್ಗೆ ಸದಾ ಕಾಳಜಿ ಹೊಂದಿರುವ ಶಾಸಕರು ನಮ್ಮ ಬೇಡಿಕೆಗಳ ಬಗ್ಗೆ ಸದನದಲ್ಲಿ ಒತ್ತಡ ತರಲಿದ್ದಾರೆ ಎಂದವರು ತಿಳಿಸಿದ್ದಾರೆ.