ಸುದ್ದಿವಿಜಯ,ಜಗಳೂರು: ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟ ನಡೆಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ತಾಲೂಕಿನ ಲಿಂಗಣ್ಣನಹಳ್ಳಿಯಲ್ಲಿ ತಿಮ್ಮೇಶ್ವರ ಕಬಡ್ಡಿ ಗೆಳೆಯರ ಬಳಗದಿಂದ ದಿ. ಶಿವಮೂರ್ತಿ ಮೇಷ್ಟ್ರು ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ 2ನೇ ಬಾರಿಗೆ ಅದ್ದೂರಿ ಗ್ರಾಮೀಣಾ ಮಟ್ಟದ ಓಪನ್ ಟೈಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಮಾತನಾಡಿದರು.
ನನಗೂ ಕ್ರೀಡೆ ಎಂದರೇ ತುಂಬ ಆಸಕ್ತಿ ಮೊದಲು ಜಗಳೂರಿನಲ್ಲಿ ಕಬಡ್ಡಿ ಆಡಿಸಿ ಶಾಸಕನಾಗಿ ಬಂದಿದ್ದೇನೆ, ಯಾವುದೇ ಕ್ರೀಡೆಯಾದರು ನನ್ನ ಸಂಪೂರ್ಣ ಸಹಕಾರವಿರುತ್ತದೆ. ಗ್ರಾಮೀಣ ಭಾಗದ ಪಂದ್ಯಾವಳಿಯಾಗಿದ್ದು ಒಬ್ಬರಿಗೊಬ್ಬರು ಸಹಕರಿಸಿಕೊಂಡು ಆಟವಾಡಿ, ಕ್ರೀಡೆಯಲ್ಲಿ ಗಲಾಟೆ, ಗದ್ದಲ ಬೇಡ ಎಂದು ಸಲಹೆ ನೀಡಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳಲ್ಲಿ ಕನಿಷ್ಠ ನೂರ್ನಾಲ್ಕು ತಂಡಗಳು ರಾಜ್ಯಮಟ್ಟದಲ್ಲಿ ಪಾಲ್ಗೊಂಡು ಆಟವಾಡಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾಸಕ್ತರು, ಪ್ರತಿಭಾವಂತರಿದ್ದಾರೆ ಅವರನ್ನು ಗುರುತಿಸಿ ತಾಲೂಕಿನಲ್ಲಿ ಒಂದು ದೊಡ್ಡ ತಂಡವಾಗಿ ರಚಿಸಬೇಕು ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ. ಹಿರಿಯ ತಲೆಮಾರುಗಳಿಂದಲೂ ಕ್ರೀಡೆ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮರೆತು ಹೋಗಿದ್ದ ಕ್ರೀಡೆಗಳು ಬೆಳಕಿಗೆ ಬರುತ್ತಿದೆ. ಕಬಡ್ಡಿ ದೇಶದಾಧ್ಯಂತ ಆಡುತ್ತಿರುವುದು ಸಂತಸವಾಗಿದೆ ಎಂದರು.
ಪಂದ್ಯಾವಳಿಯನ್ನು ಶಿಕ್ಷಕ ನಟರಾಜ್ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯ ಕೆ.ಬಿ ಓಬಳೇಶ್ ಅಧ್ಯಕ್ಷತೆವಹಿಸಿದ್ದರು. ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಎ.ಎಸ್ ಅಜ್ಜಪ್ಪ, ರವಿ, ಕೀರ್ತಿ, ಶಾಲಾ ಮುಖ್ಯ ಶಿಕ್ಷಕ ಮಹಮದ್ ಶರೀಪ್,ಶಿಕ್ಷಕ ಲೋಕೇಶ್ ಸೇರಿದಂತೆ ಮತ್ತಿತರಿದ್ದರು.