ಸುದ್ದಿವಿಜಯ, ಜಗಳೂರು: ತಾಲೂಕಿನ ಐತಿಹಾಸಿಕ ಸುಕ್ಷೇತ್ರ ದೇವಿಕೆರೆ ಗ್ರಾಮದ ಬಳಿ ಇರುವ ಕೊಡದಗುಡ್ಡದ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಬುಧವಾರ ಸಂಜೆ 4.30ಕ್ಕೆ ಅಪಾರ ಭಕ್ತ ಜನಸ್ತೋಮದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಸಾವಿರಾರು ಭಕ್ತರು ಶ್ರೀ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಕುಳ್ಳಿರಿಸಿ ಉಘೇ ಉಘೇ ವೀರಭದ್ರ ಎಂದು ಭಕ್ತಿಯಿಂದ ರಥದ ಹಗ್ಗ ಹಿಡಿದು ಪಾದಕಟ್ಟೆಯವರೆಗೆ ಎಳೆದು ಪೂಜೆ ನೆರವೇರಿಸಿದ ನಂತರ ಮತ್ತೆ ದೇವಸ್ಥಾನದ ಮುಂದೆ ಎಳೆದು ಭಕ್ತಿ ಸಮರ್ಪಿಸಿದರು.
ಈ ಭಾರಿಯ ಶ್ರೀ ವೀರಭದ್ರಸ್ವಾಮಿಯ ಪಟ 4.75 ಲಕ್ಷ ರೂಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ದಾವಣಗೆರೆ ಸಮೀಪದ ಉರಲಕಟ್ಟೆ ಗ್ರಾಮದ ಬಿಂದಾಸ್ ಎಂಬುವವರು ಪ್ರಕ್ರಿಯೆಯಲ್ಲಿ ತಮ್ಮದಾಗಿಸಿಕೊಂಡರು.
ಮಧ್ಯ ಕರ್ನಾಟಕದ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಕೊಡದಗುಡ್ಡದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹರಕೆ ಹೊತ್ತು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ದೇವಾ ಎಂದು ರಥೋತ್ಸವದ ಕಾರ್ಯಕ್ರದಮಲ್ಲಿ ಭಾಗವಹಿಸಿದ್ದರು.
ಉರಿ ಬಿಸಿಲನ್ನೂ ಲೆಕ್ಕಿಸದ ಭಕ್ತಗಣ ಡೊಳ್ಳು, ಸಮಾಳ, ನಂದಿಧ್ವಜ, ಡ್ರಮ್‍ಸೆಟ್, ಛದ್ಮವೇಷ ಧಾರಿಗಳ ಕುಣಿತ ಸೇರಿ ಅನೇಕ ವಾಧ್ಯ ಪ್ರಕಾರಗಳೊಂದಿಗೆ ಭಕ್ತಿ ಪರಾಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ರಥೋತ್ಸವ ಆರಂಭಕ್ಕೂ ಮುನ್ನ ಪಳಾರ, ಬಾಳೆ ಹಣ್ಣುಗಳನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು. ರಥದ ಗಾಲಿಗೆ ತೆಂಗಿನ ಕಾಯಿ ಸಮರ್ಪಿಸಿ ಭಕ್ತಿಯಿಂದ ಶ್ರೀ ವೀರಭದ್ರಸ್ವಾಮಿಗೆ ನಮಿಸಿದರು.
ಮೊಳಗಿದ ವೀರಭದ್ರನ ಒಡಪುಗಳು: ಬಾಯಲ್ಲಿ ನಿಂಬೆಹಣ್ಣು ಕಚ್ಚಿ, ಕೈಯಲ್ಲಿ ಖಡ್ಗ ಹಿಡಿದ ವೀರಭದ್ರ ವೇಷಧಾರಿಯ ಒಡಪುಗಳು ಸಮಾಳದ ಸುನಾದಕ್ಕೆ ನೆರದ ಭಕ್ತರದಲ್ಲಿ ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿತ್ತು. ಅಹಾ ವೀರಭದ್ರಾ ಎನ್ನುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ ಭಕ್ತರಿಂದ ಕೇಳಿ ಬಂದವು.
ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ, ಕಲ್ಲೇಶ್ ರಾಜ್‍ಪಾಟೀಲ್ ಸೇರಿದಂತೆ ಅನೇಕ ನಾಯಕರು ರಥೋತ್ಸವದಲ್ಲಿ ಭಾಗಿಯಾಗಿದ್ದರು.