ಜಗಳೂರು: ನಾಳೆ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ರಥೋತ್ಸವ: ವೀರಭದ್ರ ಸ್ವಾಮಿ ದೇವಸ್ಥಾನದ ಇತಿಹಾಸ

Suddivijaya
Suddivijaya March 7, 2023
Updated 2023/03/07 at 2:20 PM

ಸುದ್ದಿವಿಜಯ, ಜಗಳೂರು: ನಂಬಿ ಬಂದ ಭಕ್ತರ ಆರಾಧ್ಯ ದೈವ. ಮಧ್ಯ ಕರ್ನಾಟಕದ ಭಕ್ತಿ ಸಂಗಮದ ಸುಕ್ಷೇತ್ರವಾದ ತಾಲೂಕಿನ ದೇವೀಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ ಬುಧವಾರ ಸಂಜೆ 4.30ಕ್ಕೆ ಅದ್ಧೂರಿಯಾಗಿ ನೆರವೇರಲಿದೆ.

ಕೊಡದಗುಡ್ಡ ಪ್ರದೇಶದ ತುತ್ತ ತುದಿಯಲ್ಲಿ ನೆಲಸಿರುವ ಶ್ರೀ ವೀರಭದ್ರ ಸ್ವಾಮಿಯ ದರ್ಶನಕ್ಕೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು ಭಾಗ, ಹೈಕಾ ಭಾಗದ ಲಕ್ಷಾಂತರ ಭಕ್ತರನ್ನು ಆಗಮಿಸುತ್ತಾರೆ. ಭಕ್ತರ ಸಂಕಷ್ಟಗಳನ್ನು ಈಡೇರಿಸುವ ದೇವರನ್ನು ಕಣ್ತುಂಬಿಕೊಳ್ಳಲು ಸಾಗರದಂತೆ ಭಕ್ತರು ಹರಿದು ಬರುತ್ತಾರೆ. ಕೆಲವರು ಪಾದ ಯಾತ್ರೆ ಮೂಲಕ ಬಂದು ಸ್ವಾಮಿಗೆ ಸೇವೆ ಸಲ್ಲಿಸುತ್ತಾರೆ.

ಪಾಳೇಗಾರರ ಕಾಲದ ದೇಗುಲ: ಶ್ರೀ ವೀರಭದ್ರನ ದರ್ಶನಕ್ಕಾಗಿ ಸುಮಾರು 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಅಂದಾಜು 1000 ವರ್ಷಗಳ ಪುರಾತನವಾದ ಈ ದೇಗುಲವನ್ನು ಹರಪನಹಳ್ಳಿಯ ಪಾಳೇಗಾರರು ನಿರ್ಮಿಸಿದ್ದರು ಎಂದು ಐತಿಹ್ಯ ಹೇಳುತ್ತದೆ.

ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿ
ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿ

ದೇಗುಲವು ಗೋಪುರ, ಗರ್ಭಗುಡಿ ಮತ್ತು ಪ್ರಾಂಗಣವನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 8 ಅಡಿ ಎತ್ತರದ ವೀರಭದ್ರ ಸ್ವಾಮಿಯ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.

ಈ ದೇಗುಲಕ್ಕೆ ಬರುವ ಭಕ್ತರು ಏನೇ ಬೇಡಿದರು ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಬರುತ್ತಾರೆ. ವಾಮಾಚಾರ, ದೃಷ್ಟಿದೋಷ, ಚರ್ಮ ಕಾಯಿಲೆ, ದೇಹಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಇದ್ದರೆ ಅವುಗಳ ನಿವಾರಣೆಯನ್ನು ಶ್ರೀ ವೀರಭದ್ರ ಸ್ವಾಮಿ ನೆರವೇರಿಸುತ್ತಾರೆ ಎಂಬ ನಂಬಿಕೆ ಭಕ್ತರದಲ್ಲಿದೆ. ಹೀಗಾಗಿ ಭಕ್ತರು ಹರಕೆ ಕಟ್ಟಿಕೊಂಡು ಬಂದು ತಾಯತ ಕಟ್ಟಿಸಿಕೊಂಡರೆ.

ಸಮಸ್ಯೆಗಳ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದೆ. ಕ್ಷೇತ್ರದಲ್ಲಿ ವೀರಭದ್ರ ದೇವರಷ್ಟೇ ಅಲ್ಲದೇ ಭದ್ರಕಾಳಿ, ಹನುಮಂತ ದೇವರ ದೇವಳ ಇದ್ದು ಸಂಕಷ್ಟಗಳನ್ನು ಬಗೆಹರಿಸುವ ದೇವರು ಎಂದೇ ಜನ ನಂಬಿದ್ದಾರೆ.

ಬೆಟ್ಟ ಹತ್ತಿದರೆ ರೋಮಾಂಚನ: ಎರಡು ಸಾವಿರ ಅಡಿಗಳಷ್ಟು ಎತ್ತರವಾಗಿರುವ ಈ ಬೆಟ್ಟದ ಮೇಲೆ ನೆಲಸಿರುವ ಶ್ರೀ ವೀರಭದ್ರ ಸ್ವಾಮಿಯ ಕ್ಷೇತ್ರದಲ್ಲಿ ನೆಮ್ಮದಿಯ ತಾಣವಾಗಿದೆ. ಸುತ್ತಲ ಕೆರೆ, ತೋಟ, ಹಳ್ಳ, ಕುರುಚಲು ಕಾಡುಗಳು ಮನಸ್ಸಿಗೆ ಮುದ ನೀಡುತ್ತವೆ.

ಪೂಜೆ ನೆರವೇರಿಸಿದ ಭಕ್ತರು ಸುತ್ತಲೂ ಕಣ್ಣಾಡಿಸಿದರೆ ಮನೋ ಒತ್ತಡಗಳು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ. ದಾವಣಗೆರೆಯಿಂದ 42 ಕಿ.ಮೀ, ಜಗಳೂರಿನಿಂದ 15 ಕಿ.ಮೀ ದೂರವಿರುವಿರ ಈ ಸುಕ್ಷೇತ್ರದಲ್ಲಿ ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ವಿಜೃಂಭಣೆಯಿಂದ ಆರಂಭವಾಗಿವೆ.

ವೀರಭದ್ರ ನೆಲಸಲು ಕಾರಣವೇನು?:
ಪಂಚಗಣಾಧೀಶ್ವರರಲ್ಲಿ ಒಬ್ಬರದಾದ ಕೊಟ್ಟೂರು ಗುರು ಬಸವೇಶ್ವರರು ಕೊಟ್ಟೂರಿಗೆ ಬಂದಾಗ ರಾತ್ರಿ ಆಗಿದ್ದರಿಂದ ಅದೇ ಊರಿನಲ್ಲಿ ನೆಲಸಿದರು. ವೀರಭದ್ರ ಸ್ವಾಮಿಯನ್ನು ರಾತ್ರಿ ಮಲಗಲು ಜಾಗ ಕೇಳಿದಾಗ ಅದಕ್ಕೆ ಒಪ್ಪಿಗೆ ಕೊಟ್ಟರು.

ಮರುದಿನ ಬೆಳಗಾಗುವುದರಲ್ಲಿ ಕೊಟ್ಟೂರೇಶ್ವರದ ಎಲ್ಲ ಜಾಗ ಅಲಂಕರಿಸಿದರಂತೆ. ಇದನ್ನು ಪ್ರಶ್ನಿಸಿದ ವೀರಭದ್ರ ಸ್ವಾಮಿಯು, ಇದರಲ್ಲಿ ನನ್ನ ಪಾತ್ರವೇನು ಇಲ್ಲ. ಶಿವನ ಇಚ್ಛೆ ಎಂದರಂತೆ. ಇನ್ನುಮುಂದೆ ನೀವು ಕೊಡದ ಗುಡ್ಡದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಎಂದು ಹೇಳಿದರಂತೆ. ಆಗ ವೀರಭದ್ರರು ಕೊಡದ ಗುಡ್ಡದಲ್ಲಿ ನೆಲೆಸಿ ಕಲಿಯುಗದಲ್ಲೂ ಭಕ್ತರ ಇಚ್ಛೆಗಳನ್ನು ಈಡೇರಿಸುವ ದೈವವಾಗಿದ್ದಾರೆ.

ಧಾರ್ಮಿಕ ವಿಧಿವಿಧಾನಗಳು: ಮಾ.4ರಂದು ಶನಿವಾರ ಕಂಕಣಧಾರಣೆ, ಮಾ.5ರಂದು ಮಹಾಗಣಾರಾಧನೆ, ಮಾ.6ರಂದು ಗಣವಾಹನೋತ್ಸವ, ಮಾ.7ರಂದು ವೃಷಭ ವಾಹನೋತ್ಸವ, ಮಾ.8ರಂದು ಬೆಳಿಗ್ಗೆ 6ಕ್ಕೆ ಅಗ್ನಿ ಕುಂಡ ಮಹೋತ್ಸವ, ಮತ್ತು ಸಂಜೆ 4.30ಕ್ಕೆ ಮಹಾರಥೋತ್ಸವ, ಮಾ.10 ರಂದು ಓಕುಳಿ ಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!