ಸುದ್ದಿವಿಜಯ,ಜಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯರು ಬುಧವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಕೂಸ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಾತನಾಡಿ, ಒಂದು ಕುಟುಂಬಕ್ಕೆ 200 ದಿನಗಳ ಕೆಲಸ ನೀಡಬೇಕು. ಕೆಲಸ ನಿರ್ವಹಿಸಲು ಸಾಮಾಗ್ರಿಗಳ ಬಳಕೆ ಹಾಗೂ ರಿಪೇರಿಗಾಗಿ ಪ್ರತಿದಿನ 10 ರೂ ಕೂಲಿ ಹಣದ ಜತೆ ಸೇರಿಸಿ ನೀಡಲಾಗುತ್ತಿತ್ತು. ಆದರೆ ಅದನ್ನು ಕೇಂದ್ರ ಸರಕಾರ ನಿಲ್ಲಿಸಿದೆ.
ಅದನ್ನು ಕಾರ್ಮಿಕರಿಗೆ 20 ರೂ ಹೆಚ್ಚಿಸಿ ಖಾತೆಗೆ ಜಮಾ ಮಾಡಬೇಕು. ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಲಭ್ಯವಿಲ್ಲ ಎಂದಾದಲ್ಲಿ 5 ಕಿ.ಮೀ ಗಿಂತಲೂ ಹೆಚ್ಚಿನ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಹಣದ ಶೇ.10ರಷ್ಟು ಹಣ ನೀಡುತ್ತಿದ್ದ ಮೊತ್ತವನ್ನು 20 ರೂಗಳಿಗೆ ಹೆಚ್ಚಿಸಬೇಕು.
ಕಾರ್ಮಿಕರಿಗೆ ಕಾನೂನಿನಂತೆ ಕೆಲಸ ಮಾಡಿದ 154 ದಿನಗಳ ಒಳಗಾಗಿ ಕೂಲಿ ಪಾವತಿ ಆಗಬೇಕು. ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸಲು ಮೇಸ್ತ್ರಿಗಳನ್ನು ನೇಮಿಸಲಾಗಿದೆ. ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ನಿಗದಿ ಆಗಿರುವ ಹಣ ನೀಡುತ್ತಿಲ್ಲ.
ಮಹಿಳೆಯರಿಗೆ ಪ್ರತಿ ಕಾರ್ಮಿಕರಂತೆ 5 ರೂ ಮತ್ತು ಪುರುಷರಿಗೆ 4 ರೂ ನೀಡಬೇಕೆಂದು ಆದೇಶವಿದ್ದರೂ ನೀಡುತ್ತಿಲ್ಲ. ಈ ಬೇಡಿಕೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಆಗ್ರಹಿಸಿದರು.ಪಟ್ಟಣದ ಗಾಂಧಿ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಮಿಕರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಿ.ಎಸ್.ಸುಧಾ, ಎಂ.ಬಿ.ನಾಗರತ್ನ, ಮಂಜಮ್ಮ, ಬಿ.ನಾಗರಾಜ್, ಸಿ.ಲೋಕೇಶ್, ಲಲಿತಮ್ಮ, ರಾಘವೇಂದ್ರ, ಶಶಿಕುಮಾರ್, ಎ.ಕೃಷ್ಣ, ಸಿದ್ದಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.