ಸುದ್ದಿವಿಜಯ, ಜಗಳೂರು: ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರವಾಗಿ ಕಾನೂನನ್ನು ರಚಿಸಲಾಗಿದೆ. ಜನರಿಗೆ ಸಂವಿಧಾನ ದತ್ತವಾಗಿರುವ ಮೂಲಭೂತ ಹಕ್ಕುಗಳ ಬಗ್ಗೆಯಷ್ಟೇ ಅಲ್ಲದೇ ಮೂಲಭೂತ ಕರ್ತವ್ಯ ಪಾಲನೆಯ ಅರಿವೂ ಇರಬೇಕು ಎಂದು ಸಹಾಯಕ ಸರಕಾರಿ ಅಭಿಯೋಜಕರಾದ ಎಂ.ರೂಪಾ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಸಂದರ್ಭಗಳಲ್ಲಿ ನಾವುಗಳು ಮೂಲಭೂತ ಹಕ್ಕುಗಳ ಬಗೆಗಷ್ಟೇ ಮಾತನಾಡುತ್ತೇವೆ. ಆದರೆ ಮೂಲ ಭೂತ ಕರ್ತವ್ಯಗಳು ಸರಿಯಾಗಿ ಪಾಲನೆಯಾದಲ್ಲಿ ಮಾತ್ರ ಸಂವಿಧಾನದ ರಕ್ಷಣೆ ಮತ್ತು ದೇಶದ ಸೌರ್ವಭೌಮತ್ವ ಕಾಪಾಡಲು ಸಾಧ್ಯ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಇ.ಓಂಕಾರಪ್ಪ ಮಾತನಾಡಿ, ದೇಶದ ಐಕ್ಯತೆ, ಸಮಗ್ರತೆ ಮತ್ತು ಅಭಿವೃದ್ಧಿ ಸಾಧಿಸಬೇಕಾದಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳ ಪಾಲನೆಯಲ್ಲಿ ಸಮತೋಲನ ಸಾಧಿಸಬೇಕೆಂದರು. ಇಲ್ಲದೇ ಹೋದಲ್ಲಿ ಕೇವಲ ಹಕ್ಕುಗಳ ರಕ್ಷಣೆ ಬಗ್ಗೆ ಮಾತನಾಡಿ ಕರ್ತವ್ಯಗಳ ಜವಾಬ್ದಾರಿಯನ್ನು ಮರೆತರೆ ಅರಾಜಕ ಸಮಾಜವನ್ನು ನಿರ್ಮಾಣ ಮಾಡಿದಂತಾಗುತ್ತದೆ ಎಂದರು.
ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮಾತನಾಡಿ, ಎಲ್ಲ ನಾಗರಿಕರಿಗೂ ಸಂವಿಧಾನದ ಬಗ್ಗೆ ಎಲ್ಲರೂ ಗೌರವಿಟ್ಟುಕೊಳ್ಳಬೇಕು. ಮತ್ತೊಬ್ಬರ ಹಕ್ಕುಗಳಿಗೆ ಚ್ಯುತಿ ಬರವಂತೆ ನಡೆದುಕೊಂಡರೆ ಕಾನೂನು ಕ್ಷಮಿಸುವುದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಆದೇಶದಂತೆ ಆಸ್ಟರ್ 13, 14 ಮತ್ತು 15 ರಂದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಕಾನೂನು ಪಾಲಿಸಿ ಎಂದರು.
ಕಾಯಕ್ರಮದಲ್ಲಿ ತಾಪಂ ಪ್ರಭಾರ ಇಒ ಕೆ.ವೈ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ವಕೀಲರ ಸಂಘದ ಕಾರ್ಯದರ್ಶಿ ಕೆ.ವಿ.ರುದ್ರೇಶ್, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ವಕೀಲರಾದ ಕೆ.ಎಂ.ಬಸವರಾಜಪ್ಪ, ವೈ.ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.