ಸುದ್ದಿವಿಜಯ, ಜಗಳೂರು: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಲೆಕ್ಕಪತ್ರ ಮತ್ತು ಜಿಎಸ್‍ಟಿಯನ್ನು ಸರಿಯಾಗಿ ನಿಭಾಯಿಸದೇ ಬೇಜಾವಾಬ್ದಾರಿ ತೋರಿರುವ ತಾಲೂಕಿನ 22 ಗ್ರಾಪಂ ಪಿಡಿಓಗಳಿಗೆ ಬೆಂಗಳೂರು ಲೋಕಾಯುಕ್ತ ತನಿಖಾಧಿಕಾರಿ ಬಣಕಾರ್ ಪ್ರಕಾಶ್ ಕುಮಾರ್ ತಾಪಂ ಇಓ ಕಚೇರಿಯಲ್ಲಿ ಗುರುವಾರ ಕ್ಲಾಸ್ ತೆಗೆದುಕೊಂಡರು.
ಗುತ್ತಿದುರ್ಗ ಗ್ರಾಪಂ ನಲ್ಲಿ ಟೆಂಟರ್ ಕರೆಯದೇ ನರೇಗಾ ಯೋಜನೆಯಡಿ ಸಾಮಗ್ರಿ ಬಿಲ್ ಮಾಡಿಕೊಳ್ಳಲಾಗಿದೆ ಎಂದು ಕೊರಟಿಕೆರೆ ಗ್ರಾಮದ ನಾಗರಾಜ್ ಎಂಬ ವ್ಯಕ್ತಿ ಬೆಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹೀಗಾಗಿ ತಾಂತ್ರಿಕ ವಿಭಾಗದ ತನಿಖಾಧಿಕಾರಿ ಬಣಕಾರ್ ಪ್ರಕಾಶ್ ಕುಮಾರ್ ಸಂಪೂರ್ಣ ಕಡತಗಳನ್ನು ಪರಿಶೀಲಿಸಿದರು.
ಬುಧವಾರ, ಗುರುವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ತಾಪಂ ಇಓ ಕಚೇರಿಯಲ್ಲಿ ಎಲ್ಲ 22 ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳನ್ನು ಕರೆದು ನರೇಗಾ ಯೋಜನೆಯ ಸಿವಿಲ್ ಕಾಮಗಾರಿಗಳಿಗೆ ಗುತ್ತಿಗೆದಾರರು ಸರಬರಾಜು ಮಾಡಿರುವ ಸಾಮಗ್ರಿಗಳಿಗೆ ಕೆಟಿಪಿಪಿ ನಿಯಮಗಳ ಅನ್ವಯ ಟೆಂಟರ್ ಕರಯದೇಶ ಖರೀದಿಸಿ ಅದರ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನಾಗರಾಜ್ 2022,ಜ.5 ರಂದು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಇಂದು ಗುತ್ತಿದುರ್ಗ, ಬಿಸ್ತುವಳ್ಳಿ ಮತ್ತು ದೇವಿಕೆರೆ ಸೇರಿದಂತೆ ಅನೇಕ ಗ್ರಾಪಂಗಳ ಲೆಕ್ಕಪತ್ರಗಳನ್ನು ಪರಿಶೀಲಿಸಿದರು ಎಂದು ತಾಪಂ ಇಓ ಚಂದ್ರಶೇಖರ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಪಿಡಿಓಗಳ ವಿರುದ್ಧ ಗರಂ:
ನರೇಗಾ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು 10 ಗಂಟೆ ಹೊತ್ತಿಗೆ ಎಲ್ಲಾ 22 ಪಿಡಿಒಗಳು ಹಾಜರುಪಡಿಸಿ, ಸೂಕ್ತ ಮಾಹಿತಿ ನೀಡಿ ಎಂದು ಪಿಡಿಓಗಳಿಗೆ ಹೇಳಿದರೂ ಕೆಲ ಪಿಡಿಓಗಳು 12 ಗಂಟೆಯಾದರೂ ಕಚೇರಿಗೆ ಬಾರದೇ ಇದ್ದಿದ್ದರಿಂದ ಸಿಟ್ಟಿಗೆದ್ದ ತನಿಖಾಧಿಕಾರಿ ಬಣಕಾರ್ ಪ್ರಕಾಶ್‍ಕುಮಾರ್ ಅವರು ಪಿಡಿಓಗಳ ವಿರುದ್ಧ ಗರಂ ಆದರು. ನಿಮಗಾಗಿ ನಾನು ಕಾಯಬೇಕೆ? ಎಂದು ಪ್ರಶ್ನಿಸಿ, ಸಮಯ ಪಾಲನೆ ಮಾಡುವ ಪರಿಪಾಠ ಬೆಳೆಸಿಕೊಳ್ಳಿ ಎಂದು ಬುದ್ಧಿ ಹೇಳಿದರು ಎಂದು ಮೂಲಗಳು ತಿಳಿಸಿವೆ.