ಸುದ್ದಿವಿಜಯ, ಜಗಳೂರು: ಶಾಸಕ ಎಸ್.ವಿ.ರಾಮಚಂದ್ರ ಅವರ ಜನ್ಮದಿನದ ಸಂಭ್ರಮಾಚರಣೆಯ ವೇಳೆ ಸೋಮವಾರ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕ ಸಂತೋಷ್ ಮತ್ತು ಪಪಂ ಅಧ್ಯಕ್ಷರಾದ ವಿಶಾಲಾಕ್ಷಿ ಅವರ ಪತಿ ಓಬಳೇಶ್ ಅವರ ಜೇಬಿನಲ್ಲಿದ್ದ ತಲಾ 50 ಸಾವಿರ ರೂಗಳನ್ನು ಕಳ್ಳರು ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.
ವಿಪರೀತ ಜನ ಸಂದಣಿ ಇರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾಜಕಾರಣಿಗಳ ಬೆಂಬಲಿಗರಂತೆ ವೈಟ್ ಅಂಡ್ ವೈಟ್ ಬಟ್ಟೆ ದರಿಸಿ ವೇದಿಕೆ ಮೇಲೆ ಆಗಮಿಸಿ ಶಾಸಕರಿಗೆ ಅಭಿನಂದಿಸುವ ನೆಪದಲ್ಲಿ ಶಾಸಕರ ಪಿಎ ಸಂತೋಷ್ ಅವರ ಜೇಬನ್ನು ಮುಟ್ಟಿ ಹಣ ಖಾತ್ರಿ ಆಗುತ್ತಿದ್ದಂತೆ ಇನ್ನಷ್ಟು ಕ್ರೌಡ್ ಸೃಷ್ಟಿಸಿ ಜೇಬಿಗೆ ಕೈಹಾಕಿ ಹಣ ಎತ್ತಿ ಮತ್ತೊಬ್ಬರಿಗೆ ಕೊಡುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಾಸಕರ ಬೆಂಬಲಿಗರು ಮತ್ತು ಅಭಿಮಾನಿಗಳ ಸೋಗಿನಲ್ಲಿ ಬಂದ ಮೂರ್ನಾಲ್ಕು ಜನ ಜೇಬುಗಳ್ಳರು ವೇದಿಕೆಯ ಮೇಲೆ ಹೂಗುಚ್ಛ ನೀಡಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಹಣ ಲಪಟಾಯಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸರೆಯಾಗಿದೆ.
ಪಪಂ ಅಧ್ಯಕ್ಷರಾದ ವಿಶಾಲಾಕ್ಷಿ ಅವರ ಪತಿ ಓಬಳೇಶ್ ಸಹ 50 ಸಾವಿರ ಹಣ ಕಳೆದುಕೊಂಡಿದ್ದಾರೆ. ಕಳ್ಳತನ ಸಂಬಂಧ ಜಗಳೂರು ಪಟ್ಟಣದಲ್ಲಿ ಪ್ರಕರಣ ದಾಖಲಿಸುವುದಾಗಿ ಶಾಸಕರ ಪಿಎ ಸಂತೋಷ್ ಮತ್ತು ಓಬಳೇಶ್ ತಿಳಿಸಿದ್ದಾರೆ. ವಿಡಿಯೋ, ಫೋಟೋಗಳನ್ನು ಪರಿಶೀಲಿಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.