ಸುದ್ದಿವಿಜಯ,ಜಗಳೂರು: ವಿಕಲ ಚೇತನರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದ್ದವಾಗಿವೆ. ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗ ವ್ಯಾಪಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ದಾವಣಗೆರೆ ಪಕ್ಷದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ವಿಕಲಚೇತನರ ಮುಖಂಡ ಮಹಾಂತೇಶ್ ಬ್ರಹ್ಮ ಅವರು ರವಿಕುಮಾರ್ ಅವರಿಗೆ ಭೇಟಿ ಮಾಡಿ ತಾಲ್ಲೂಕಿನಲ್ಲಿ ಶೀಘ್ರದಲ್ಲೇ ವಿಶೇಷ ಚೇತನರ ಸಮಾವೇಶ ಹಮ್ಮಿಕೊಳ್ಳಲು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅವರು, ನನ್ನ ವಿಧಾನ ಪರಿಷತ್ ಸದಸ್ಯತ್ವದ ಸ್ಥಳೀಯ ಪ್ರದೇಶ ಅಭಿವೃದ್ಧಿಯ ಅನುದಾನದಡಿಯಲ್ಲಿ ತಾಲ್ಲೂಕಿನ ವಿಶೇಷ ಚೇತನ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದ್ದೇನೆ.
ವಿಕಲಚೇತನರ ಸಮಾವೇಶಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು ಶಾಸಕ ಎಸ್.ವಿ.ರಾಮಚಂದ್ರರವರ ಬಳಿ ಮಾತನಾಡುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಮುಖಂಡ ಮಹಾಂತೇಶ್ ಬ್ರಹ್ಮ, ತಾಲ್ಲೂಕಿನ ಬಿಜೆಪಿ ಮುಖಂಡ ಧರ್ಮನಾಯಕ್, ಭರಮಸಮುದ್ರ ಗ್ರಾ.ಪಂ.ಸದಸ್ಯರಾದ ಜೆ.ಟಿ.ಬಸವರಾಜ್ ಉಪಸ್ಥಿತರಿದ್ದರು.