ಜಗಳೂರು:ದೇವಿಕೆರೆ ಪಿಎಸಿಎಸ್ ಮುಚ್ಚಲು ಶಾಸಕರ ಷಡ್ಯಂತ್ರ: ಪಿಎಸಿಎಸ್ ಅಧ್ಯಕ್ಷ ಬಸವಾಪುರ ರವಿಚಂದ್ರ ಗಂಭೀರ ಆರೋಪ

Suddivijaya
Suddivijaya August 22, 2022
Updated 2022/08/22 at 1:43 PM

ಸುದ್ದಿವಿಜಯ,ಜಗಳೂರು: ರೈತರ ಹಿತಕ್ಕಾಗಿ ಜನ್ಮತಾಳಿದ ತಾಲೂಕಿನ ದೇವಿಕೆರೆ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ (ಪಿಎಸಿಎಸ್)ಸಂಘವನ್ನು ವ್ಯವಸ್ಥಿತವಾಗಿ ಮುಚ್ಚಲು ಶಾಸಕರಾಗಿರುವ ಎಸ್.ವಿ.ರಾಮಚಂದ್ರ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಬಸವಾಪುರ ರವಿಚಂದ್ರ ನೇರ ಆರೋಪ ಮಾಡಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು,
ಕ್ಷೇತ್ರಾಧಿಕಾರಿ ಎಚ್.ಆರ್. ಹಾಲಸ್ವಾಮಿ ಅವರು ನೀಡಿದ ರಾಜಕೀಯ ದುರುದ್ದೇಶ ವರದಿ ಆಧರಿಸಿ ಸಹಕಾರ ಸಂಘಗಳ ನಿಬಂಧಕರು ನಮ್ಮ ಸಂಘವನ್ನು ಸೂಪರ್‍ಸೀಡ್ ಮಾಡಿದ್ದರು. ಇದರ ವಿರುದ್ಧ ನ್ಯಾಯಾಲಯದಲ್ಲಿ ಆರು ತಿಂಗಳು ಹೋರಾಟ ನಡೆಸಿ ತಡೆಯಾಜ್ಞೆ ತಂದು ಪುನಃ ಅಧಿಕಾರ ವಹಿಸಿಕೊಂಡಿರುತ್ತೇವೆ.

ಪಿಸಿಸಿ ಬ್ಯಾಂಕಿನಿಂದ ನಮ್ಮ ಸಂಘಕ್ಕೆ ಕ್ಷೇತ್ರಾಧಿಕಾರಿಗಳಾಗಿರುವ ಎಚ್.ಆರ್.ಹಾಲಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್, ಆಡಳಿತಾಧಿಕಾರಿ ಜಗದೀಶ್ ಅಕ್ರಮವಾಗಿ ಸಾಲ ನೀಡಿ ಸಂಗ್ರಹವಾದ 15 ಲಕ್ಷ ಮತ್ತು ಮಾರ್ಜಿನ್ ಹಣದ 5 ಲಕ್ಷ ರೂ ಸೇರಿ ಒಟ್ಟು 20 ಲಕ್ಷವನ್ನು ಬಿಡಿಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಗುರುತರವಾದ ಆರೋಪ ಮಾಡಿದರು.

ದೇವಿಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ (ಪಿಎಸಿಎಸ್)ಸಂಘದ ಅಧ್ಯಕ್ಷ ಬಸವಾಪುರ ರವಿಚಂದ್ರ ಸುದ್ದಿಗೋಷ್ಠಿ ನಡೆಸಿದರು.
ದೇವಿಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ (ಪಿಎಸಿಎಸ್)ಸಂಘದ ಅಧ್ಯಕ್ಷ ಬಸವಾಪುರ ರವಿಚಂದ್ರ ಸುದ್ದಿಗೋಷ್ಠಿ ನಡೆಸಿದರು.

ಸೇವಾ ಸಹಕಾರ ಸಂಘದಲ್ಲಿ ದುರಾಡಳಿತ ಮಿತಿಮೀರಿದೆ. ಅವರು ಬ್ಯಾಂಕಿನ ಅಧಿಕಾರಿಯಂತೆ ವರ್ತಿಸದೇ ಮನ ಬಂದಂತೆ ಆಡಳಿತ ಮಾಡಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಾಃ ಕಾರಣ ಇಲ್ಲ ಸಲ್ಲದ ಆರೋಪ ಮಾಡಿ ರಾಜಕೀಯ ಬಳಸಿಕೊಂಡು ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಹಿಟ್ಲರ್‍ನಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಕಾರಣ ಶಾಸಕ ಎಸ್.ವಿ.ರಾಮಚಂದ್ರ ಅವರೇ ನೇರಕಾರಣ ಎಂದು ಗಂಭೀರ ಆರೋಪ ಮಾಡಿದರು.

ಆಡಳಿತ ಮಂಡಳಿ ರದ್ದಾದ ಸಮಯದಲ್ಲಿ ಸಂಘದ ಸದಸ್ಯರು ಬ್ಯಾಂಕಿಗೆ ಪಾವತಿಸಬೇಕಾದ 85 ಲಕ್ಷ ರೂಗಳನ್ನು ಉದ್ದೇಶಪೂರ್ವಕವಾಗಿ ಸುಸ್ತಿ ಮಾಡಿ ರೈತರಿಗೆ ಬಡ್ಡಿ ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸದಸ್ಯ ರೈತರಿಗೆ ಎರಡರಷ್ಟು ಸಾಲ ಮಂಜೂರು ಮಾಡಿಸಿ ರೈತರಿಂದ ಶೇ.10 ಕಮಿಷನ್ ಪಡೆದು 1.85 ಕೋಟಿ ರೂ. ಸಾಲ ಮಂಜೂರು ಮಾಡಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಸಂಘದ ವ್ಯಾಪ್ತಿಗೆ ಬರುವ ಸದಸ್ಯರುಗಳಿಗೆ 1.83 ಕೋಟಿ ರೂ ಹೊಸ ಸಾಲವನ್ನು ನೀಡಿದ್ದು ಯಾವ ಉದ್ದೇಶಕ್ಕಾಗಿ ಎಂದು ಪ್ರಶ್ನಿಸಿದ ಅವರು, ಬೇರೆ ಬ್ಯಾಂಕ್‍ಗಳಲ್ಲಿ ಸಾಲವಿದ್ದರೂ ಸದಸ್ಯರಿಗೆ ಸಾಲ ನೀಡಿ ಸಂಘವನ್ನು ವ್ಯವಸ್ಥಿತವಾಗಿ ಮುಚ್ಚಲು ಕಾರಣರಾದ ಕ್ಷೇತ್ರಾಧಿಕಾರಿ ಹಾಲಸ್ವಾಮಿ ನೇರ ಕಾರಣರು.

ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಕೈಗೂ ಸಿಗದೇ ರಾಜಕೀಯ ಮಾಡುತ್ತಾ ಶಾಸಕರ ಮಾತು ಕೇಳುತ್ತಾ ಸಂಘವನ್ನು ಮುಚ್ಚುವ ಹಂತಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಮಂಡಳಿ ರದ್ದಾದಕೂಡಲೇ 3.50 ಕೋಟಿ ರೂಗಳನ್ನು ತಮಗೆ ಬೇಕಾದವರಿಗೆ ಎರಡೇ ತಿಂಗಳಲ್ಲಿ ಸಾಲ ನೀಡಿದ್ದಾರೆ. ಸಂಘದಲ್ಲಿ ಸಂಪೂರ್ಣವಾಗಿ ರಾಜಕೀಯ ಬೆರೆತಿದೆ. ಕ್ಷೇತ್ರಾಧಿಕಾರಿಗಳ ಪ್ರಭಾವದಿಂದ ಬ್ಯಾಂಕಿಗೆ ಮರು ಪಾವತಿ ಮಾಡಬೇಕಾದ 85 ಲಕ್ಷ ಸಾಲವನ್ನು ಸುಸ್ತು ಮಾಡಿ ಉದ್ದೇಶ ಪೂರ್ವಕವಾಗಿ ರೈತರನ್ನು ಹಾಳು ಮಾಡಲು ಹೊರಟಿದ್ದಾರೆ.

ಇದರಿಂದ ರೈತರು ಸುಸ್ತಿದಾರರಾಗಿದ್ದು, ಬಡ್ಡಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಘದ ಅಡಿ ಬರುವ ಮೆದಿಕೇರನಹಳ್ಳಿ ಗ್ರಾಮದ 187 ಜನ ರೈತ ಸದಸ್ಯರಿಗೆ ಹೊಸ ಸಾಲ ನೀಡಿ ಅಕ್ರಮ ಎಸಗಿದ್ದಾರೆ. ಸಂಘದದಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತಿ ಸಂಘವನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಕ್ಷೇತ್ರಾಧಿಕಾರಿ ಹಾಲಸ್ವಾಮಿ ಅವರ ಅಕ್ರಮದ ಬಗ್ಗೆ ತನಿಖೆ ಆರಂಭಿಸಬೇಕು.

ಈ ಅವ್ಯವಹಾರದಿಂದ ಬೇಸತ್ತು 12 ಜನ ನಿರ್ದೇಶಕರು ರಾಜೀನಾಮೆ ನೀಡಲು ಮುಂದಾಗಿದ್ದೇವೆ ಎಂದರು.
ಜಿಲ್ಲೆಯಲ್ಲಿ 183 ಸಹಕಾರ ಸಂಘಗಳಿದ್ದು, ದೇವಿಕೆರೆ ಸಂಘಕ್ಕೆ ಮಲತಾಯಿ ದೋರಣೆ ಮಾಡುತ್ತಿರುವುದು ರಾಜಕೀಯ ಪ್ರೇರಣೆ ಎದ್ದು ಕಾಣುತ್ತಿದೆ. ರಾಜಕೀಯ ಹಸ್ತಕ್ಷೇಪ ಇರಬಾರದೆಂಬ ನಿಯಮವಿದ್ದರೂ ಅಧಿಕಾರಿಗಳು ರಾಜಕೀಯ ಪ್ರಭಾವಿಗಳ ಕಪಿಮುಷ್ಠಿಗೆ ಒಳಗಾಗಿ ನಿಯಮಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

 
ಸಂಘದ ಅಡಿ ಬರುವ ಕಸಬ ಹೋಬಳಿಯ ಬಗ್ಗೆನಹಳ್ಳಿ ಸನಂ 13ರ ಜಮೀನು ಮಾಲೀಕರಾದ ಆರ್.ತಿಪ್ಪೇಸ್ವಾಮಿ ಅವರ 3 ಎಕರೆ ಜಮೀನು ಪಾಳುಬಿದ್ದಿದೆ. ಅದಕ್ಕೆ ಸುಳ್ಳು ಬೆಳೆ ದೂಢೀಕರಣ ಪತ್ರ ಸೃಷ್ಟಿಸಿ ಅಡಕೆ ಮತ್ತು ಬಾಳೆ ಬೆಳೆಗೆ ಮೂರು ಲಕ್ಷ ಸಾಲ ಮಂಜೂರು ಮಾಡಿದ್ದಾರೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಇವೆ ಎಂದು ಖಾಲಿ ಹೊಲದ ವಿಡಿಯೋ ದಾಖಲೆಗಳನ್ನು ಕಾಂಗ್ರೆಸ್ ಮುಖಂಡ ಎಲ್.ಬಿ.ಭೈರೇಶ್ ಬಹಿರಂಗಪಡಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!