ಸುದ್ದಿವಿಜಯ, ಜಗಳೂರು: ರಾತ್ರೋ ರಾತ್ರಿ ಕಾಡು ಹಂದಿ ದಾಳಿಗೆ ಸುಮಾರು 300ಕ್ಕೂ ಹೆಚ್ಚು ಬಾಳೆ ಸಸಿಗಳು ಹಾಳಾಗಿರುವ ಘಟನೆ ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ ನಡೆದಿದೆ.
ಅರಿಶಿಣಗುಂಡಿ ಗ್ರಾಮದ ಎನ್.ಸಿ.ರಾಜಣ್ಣ ಎಂಬ ರೈತರ ಹೊಲದಲ್ಲಿ ಗುರುವಾರ ರಾತ್ರಿ ಹಂದಿಗಳ ಹಿಂಡು ದಾಂಧಲೆ ಮಾಡಿ ಅಂದಾಜು 300 ಗಿಡಗಳನ್ನು ತಿಂದು ಹಾಳು ಮಾಡಿವೆ. ಅದೇ ಗ್ರಾಮದ ಮತ್ತೊಬ್ಬ ರೈತ ರಾಜಣ್ಣ ಮತ್ತು ರವಿಕುಮಾರ್ ಎಂಬುವರ ತೋಟದಲ್ಲಿಯೂ 150ಕ್ಕೂ ಹೆಚ್ಚು ಬಾಳೆ ಸಸಿಗಳನ್ನು ಹಂದಿಗಳು ನಾಶ ಮಾಡಿವೆ.
ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ದುಭಾರಿ ಅಂಗಾಂಶ ಏಲಕ್ಕಿ ಬಾಳೆ ಸಸಿಗಳನ್ನು ರೈತರು ನಾಟಿ ಮಾಡಿದ್ದರು. ಕಾಡು ಹಂದಿಗಳು ಸಸಿಗಳನ್ನು ಸರ್ವ ನಾಶ ಮಾಡಿದ್ದು ಅಪಾರ ಪ್ರಮಾಣದ ನಷ್ಟ ಉಂಟು ಮಾಡಿವೆ ಎಂದು ರೈತ ಎನ್.ಸಿ.ರಾಜಣ್ಣ ನೋವು ತೋಡಿಕೊಂಡರು. ಕಾಡು ಹಂದಿಗಳ ಹತೋಟಿಗೆ ತಾಲೂಕು ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾಡು ಹಂದಿಗಳು ದಾಳಿ ತಡೆಗೆ ಸೋಲಾರ್ ಫೆನ್ಸಿಂಗ್ ಅಗತ್ಯವಿದೆ. ಇತ್ತೀಚಿಗೆ ಬೆಳೆಗಳಲ್ಲಿ ವೈವಿಧ್ಯತೆ ಹೆಚ್ಚಾಗುತ್ತಿದ್ದು ಕಾಡು ಹಂದಿಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಹೀಗಾಗಿ ಆಹಾರ ಹರಸಿ ನಾಡಿನತ್ತ ಬರುತ್ತಿವೆ. ರೈತರು ದೂರು ಕೊಟ್ಟರೆ ಫಸಲು ಮಹಜರ್ ಮಾಡಿಸಿ ಇಲಾಖೆಯಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ.
-ಬಿ.ಸಿ.ಶ್ರೀನಿವಾಸ್, ವಲಯ ಅರಣ್ಯ ಅಧಿಕಾರಿ, ಜಗಳೂರು