ಸುದ್ದಿವಿಜಯ ಜಗಳೂರು. ಡಾ.ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ಜ.26ರಂದು ಅನಾವರಣಗೊಳಿಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಜಗಳೂರಿನ ದಾವಣಗೆರೆ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಅನುದಾನ ಸೇರಿದಂತೆ ಒಟ್ಟು 10 ಲಕ್ಷ ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲಾಗುತ್ತಿದೆ. ಆದರೆ ಪುತ್ಥಳಿ ಸ್ಥಾಪನೆಯಾದ ನಂತರ ಅದನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವ ಜವಾಬ್ದಾರಿ ತಮ್ಮೆಲ್ಲರ ಕರ್ತವ್ಯವಾಗಿದೆ. ದೇಶಕ್ಕೆ ಸಂವಿಧಾನ ಬರೆದಕೊಟ್ಟ ಮಹಾನ್ ನಾಯಕ ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲಾ, ಮೀಸಲಾತಿಯಡಿ ಪ್ರಯೋಜನ ಪಡೆಯುವ ಪ್ರತಿಯೊಂದು ಸಮುದಾಯದವರು ಆತನಿಗೆ ಋಣಿಯಾಗಿದ್ದಾರೆ. ಅಂಬೇಡ್ಕರ್‌ಗೆ ಅಪಮಾನ ಮಾಡುವುದು ಪಾಪದ ಕೆಲಸವಾಗಿದೆ ಎಂದರು.
ಸಂವಿಧಾನದಿಂದಲೇ ಎಸ್ಟಿ ಮೀಸಲು ಕ್ಷೇತ್ರ ಜಗಳೂರಿನಲ್ಲಿ ಮೂರನೇ ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿದ್ದರಿಂದಲೇ ಮತದಾರರು ನನ್ನನ್ನು ಕೈ ಹಿಡಿದಿದ್ದಾರೆ. ಮುಂದೆಯೇ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವೇ ವರ್ಷಗಳಲ್ಲಿ ಜಗಳೂರು ಹಸಿರು ನಾಡು:
ಜಗಳೂರು ತಾಲೂಕು ಹಿಂದುಳಿದ ಮತ್ತು ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಿತ್ತೊಗೆಯುವ ಕಾಲ ಸನಿಹಕ್ಕೆ ಬಂದಿದೆ. 57ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ. ಬಹುಗ್ರಾಮ ಕುಡಿಯುವ ನೀರು ಸೇರಿದಂತೆ ಮೂರು ಮಹತ್ವದ ದೊಡ್ಡ ಯೋಜನೆ ಜಾರಿಗೆ ಬಂದಿದೆ. ಕೆಲವೇ ವರ್ಷಗಳಲ್ಲಿ ನೀರಾವರಿ ಪ್ರದೇಶವಾಗಲಿದ್ದು, ಪ್ರತಿಯೊಬ್ಬ ರೈತರು ಸಂತಸದಿಂದ ಬದುಕುತ್ತಾರೆ ಎಂದು ಶಾಸಕರು ಭರವಸೆ ನೀಡಿದರು.
ಪ.ಪಂ ಮಾಜಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ತುಂಬ ಸಂತಸ ತಂದಿದೆ. ಇದು ಯಾವಾಗಲೋ ಆಗಬೇಕಿದ್ದ ಕೆಲಸ ಈಗ ಈಡೇರಿದೆ. ದಲಿತಪರ ಸಂಘಟನೆಗಳಲ್ಲದೇ ಎಲ್ಲಾ ಸಂಘಟನೆಗಳು ಅಂಬೇಡ್ಕರ್ ಸುರಕ್ಷತೆಯ ಬಗ್ಗೆ ಕಾಳಜಿ ತೋರಬೇಕು ಎಂದರು.
ತಹಸೀಲ್ದಾರ್ ಸಂತೋಷ್ ಕುಮಾರ್, ಪ.ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಕುಮಾರಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್, ಪ.ಪಂ.ಸದಸ್ಯರಾದ ನವೀನ್ ಕುಮಾರ್, ದೇವರಾಜ್, ಪಾಪಲಿಂಗಪ್ಪ, ಸಿದ್ದಪ್ಪ, ನಾಮನಿರ್ದೇಶಿತ ಸದಸ್ಯ ರುದ್ರಮುನಿ,ಮುಖಂಡರಾದ ಬಿಸ್ತುವಳ್ಳಿ ಬಾಬು, ಗ್ಯಾಸ್, ಓಬಣ್ಣ, ಬಿಳಿಚೋಡು ಹಾಲೇಶ್, ಜಿ.ಎಚ್ ಮಹೇಶ್ ಸೇರಿದಂತೆ ಮತ್ತಿತರಿದ್ದರು.