Suddivijaya
Suddivijaya October 17, 2022
Updated 2022/10/17 at 12:28 PM

ಸುದ್ದಿವಿಜಯ  ಜಗಳೂರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಹಾಗೂ ಕಲ್ಲುಹೊಡೆಯುವ ಕ್ವಾರಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ತಾಲೂಕು ಗೌರವಾಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ, ದಿನ ಗೂಲಿ ಕೆಲಸ ಮಾಡಿ ಜೀವನ ನಡೆಸುವ ಕಟ್ಟಡ ಕಾರ್ಮಿಕರ ಬದುಕು ಅಯೋಮಯವಾಗಿದೆ. ಸರ್ಕಾರ ನೀಡಿದ ಭರವಸೆಗಳು ಈಡೇರಿಲ್ಲ ಎಂದು ಕಿಡಿಕಾರಿದರು.

ಸರ್ಕಾರದ ಅಧೀನದಲ್ಲಿ ಬರುವ ವಿವಿಧ ವಸತಿಯೋಜನೆಗಳಲ್ಲಿ ವಿಶೇಷವಾಗಿ ಕೊಳಚೆ ನಿರ್ಮೂಲನಾ ಮಂಡಳಿ(ಸ್ಲಂಬೋರ್ಡ್)ಮುಖಾಂತರ ಕಟ್ಟಡ ಕಾರ್ಮಿಕರ ಬೆವರಿನ ಶ್ರಮದ ಹಣವನ್ನು ವಸತಿ ಸಚಿವರುಗಳ ಒಳಸಂಚಿನಿಂದ ಸಾರ್ವಜನಿಕರಿಗೆ ತಪ್ಪುಸಂದೇಶ ನೀಡಿ ಉಚಿತ ಬಸ್ ಪಾಸ್ ಹೆಸರಿನಡಿ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಒಬ್ಬ ಫಲಾನುಭವಿಗಳಿಗೆ ಮಾಸಿಕ ರೂ.1400 ದುರ್ಬಳಕೆಮಾಡಿಕೊಳ್ಳುತ್ತಿರುವುದನ್ನು ಕೂಡಲೇ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಕಟ್ಟಡಕಾರ್ಮಿಕರು ಬಹುತೇಕವಾಗಿ ಸ್ಲಂ ಬೋರ್ಡ್ ನಲ್ಲಿ ವಾಸಮಾಡುತ್ತಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗಗಳ ನಿರ್ಮೂಲನಾ ಮಂಡಳಿಗೆ 433 ಕೋಟಿ ರೂ.ಮಂಜೂರು ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು, ವಸತಿ ಯೋಜನೆಯಡಿ ಅರ್ಜಿಸಲ್ಲಿಸಿದ ಕಾರ್ಮಿಕ ಫಲಾನುಭವಿಗಳಿಗೆ 2 ಲಕ್ಷ ರೂ ನೇರವಾಗಿ ಮಂಜೂರು ಮಾಡಬೇಕು, ಕೋವಿಡ್ ಸಂದರ್ಭದಲ್ಲಿ ಕಲ್ಯಾಣ ಮಂಡಳಿ ಹಣದಲ್ಲಿ ಆಹಾರ ಕಿಟ್, ಬೂಸ್ಟರ್ ಕಿಟ್, ಸುರಕ್ಷಾ ಕಿಟ್ ಗಳ ಕಳಪೆ ಸಾಮಗ್ರಿಗಳಿಗೆ ಬಳಸಿದ ನೂರಾರು ಕೋಟಿ ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಆರೋಗ್ಯ ಸಂಜೀವಿ 2021, ಟೂಲ್ ಕಿಟ್ ಗಳನ್ನು 36 ಕೆಟಗರಿ ಕಾರ್ಮಿಕರಿಗೂ ಸರಿಸಮಾನವಾಗಿ ವಿತರಿಸಲು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ಬೋಗಸ್ ಕಾರ್ಡ್ ಮಾಡಿಕೊಡುವುದನ್ನು ತಡೆಗಟ್ಟಬೇಕು,ಸೇವಾಸಿಂದು ತಾಂತ್ರಿಕ ದೋಷ ಸರಿಪಡಿಸಿ ಅರ್ಜಿಸಲ್ಲಿಸಿದ ಅರ್ಹ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ ಸೇರಿದಂತೆ ಕಾರ್ಮಿಕರ ಸೌಲಭ್ಯಗಳನ್ನು ಶೀಘ್ರ ಒದಗಿಸಬೇಕು ಇಲ್ಲವಾದರೆ ಉಗ್ರಸ್ವರೂಪದ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ,ತಾಲೂಕು ಅಧ್ಯಕ್ಷ ವೀರಣ್ಣ,ಖಜಾಂಚಿ ನಾಜೀಮಾಸಾಬ್,ಎಐವೈಫ್ ಸಂಚಾಲಕ ಮಲೆಮಾಚಿಕೆರೆ ನಾಗರಾಜ್,ಮುಖಂಡರಾದ ಸಿದ್ದಯ್ಯನಕೋಟೆ ರಮೇಶ್,ಅಜ್ಜಪ್ಪ,ತಿಮ್ಮೇಶ್,ಆಶಾ,ತಿಪ್ಪಮ್ಮ,ಹನುಮಂತಪ್ಪ,ಕಲ್ಲೇಶ್,ಮಂಜುನಾಥ್,ಶಾಂತವೀರಪ್ಪ,ಇಂದಿರಾ ಗುರುಸ್ವಾಮಿ,ನಿಬಗೂರುವಿಶಾಲ,ಇಂದಿರಮ್ಮ,ಪ್ರೇಮ,ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!