ಸುದ್ದಿವಿಜಯ,ಜಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಗಳೂರು ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೊಯ್ಲಿಗೆ ಬಂದಿರುವ ಫಸಲು ನೀರಿನಲ್ಲಿ ಮುಳುಗಿವೆ. ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ, ಬಾಳೆ, ಶೇಂಗಾ, ಹತ್ತಿ ಎಲ್ಲವೂ ನೀರಿನಲ್ಲಿ ಮುಳುಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಚಿಕ್ಕಹರಕೆರೆ ಕೆರೆ ಕೋಡಿ ಬಿದ್ದಿದ್ದು ಗ್ರಾಮ ಸಂಪೂರ್ಣ ದ್ವೀಪದಂತಾಗಿದೆ. ಯಾವುದೇ ವಾಹನಗಳು ಆ ಗ್ರಾಮಕ್ಕೆ ಹೋಗದೇ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದ್ದು ಜನರು ಗ್ರಾಮದಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜಗಳೂರು ಕೆರೆಗೆ ಭಾರಿ ಪ್ರಾಮಾಣದ ನೀರು ಹರಿದು ತುಂಬುವ ಹಂತಕ್ಕೆ ಬಂದಿದೆ. ಚದರಗೊಳ್ಳ, ಹಾಲೇಜಕಲ್ಲುವ, ಬಿದರಕೆರೆ, ಹೊಸಕೆರೆ, ಜಮ್ಮಾಪುರ, ರಸ್ತೆಮಾಕುಂಟೆ, ಬಿಸ್ತುವಳ್ಳಿ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.
ಹಳ್ಳ ಕೊಳ್ಳಗಳು ನಿರಂತರವಾಗಿ ಹರಿಯುತ್ತಿದ್ದು ವಾಹನ ಸವಾರರು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ದಾವಣಗೆರೆ ಜಗಳೂರು ಸಂಪರ್ಕ ಕಲ್ಪಿಸುವ ಮಾರ್ಗದ ಅಣಜಿಕೆರೆ ಸಂಪೂರ್ಣ ಕೋಡಿಬಿದ್ದು ಯಾವುದೇ ವಾಹನಗಳು ಸಂಚಾರ ಮಾಡದಂತಾಗಿದೆ ಹೀಗಾಗಿ ಮಾರ್ಗ ಬದಲಾವಣೆ ಮಾಡಿ ಭರಮಸಾಗರ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಸಂಚಾರಿಸುತ್ತಿವೆ.
ಇನ್ನು ಸೂರಡ್ಡಿಹಳ್ಳಿ ಗ್ರಾಮದ ಬತ್ತಿ ಹೋಗಿದ್ದ ಕುಡಿಯುವ ನೀರಿನ ಕೇಸಿಂಗ್ ಪೈಪ್ ಮೂಲಕ ನೀರು ಒಂದು ವಾರದಿಂದ ಹೊರ ಬರುತ್ತಿದೆ. ಪಲ್ಲಾಗಟ್ಟೆ, ಪಾಲನಾಯಕನ ಕೋಟೆ, ದೇವೀಕೆರೆ, ಗೋಡೆ, ತಾರೆಹಳ್ಳಿ, ಕೆಳಗೋಟೆ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ರಸ್ತೆಗಳೆಲಾ ಗುಂಡಿಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ:
ಜಗಳೂರು 25.8 ಮಿ.ಮೀ, ಬಿಳಿಚೋಡು 40 ಮಿಮೀ, ಸಂಗೇನಹಳ್ಳಿಯಲ್ಲಿ 43 ಮಿಮೀ, ಚಿಕ್ಕಬನ್ನಿಹಟ್ಟಿಯಲ್ಲಿ 23 ಮಿಮೀ, ಸೊಕ್ಕೆ ಹೋಬಳಿಯಲ್ಲಿ 29.4 ಮಿಮೀ ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ 161.2 ಮಿಮೀ ಮಳೆಯಾಗಿದೆ. ಸರಾಸರಿ 32.34 ಮಿಮೀ ಮಳೆಯಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾಹಿತಿ ನೀಡಿದ್ದಾರೆ.