ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೋರಾಟಕ್ಕೆ ಬೀದಿಗಿಳಿದ ರೈತ ಸಂಘ!

Suddivijaya
Suddivijaya September 22, 2022
Updated 2022/09/22 at 1:11 PM

ಸುದ್ದಿವಿಜಯ ಜಗಳೂರು.ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ಹಾಗೂ ಎಪಿಎಂಸಿ ಮೂರು ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನೆ ಹಳೆ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರೂಪಿಸಿ ಸರ್ಕಾರಗಳು ವಿರುದ್ದ ರೈತರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲಿಂದ ಹೊಸ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ದೇಶಕ್ಕೆ ಅನ್ನ ಬೆಳೆದುಕೊಡುವ ರೈತರಿಗೆ ಸರ್ಕಾರ ಅನೇಕಾರು ಸೌಲಭ್ಯಗಳನ್ನು ಕಲ್ಪಿಸಬೇಕು, ನೂರಾರು ವರ್ಷಗಳಿಂದಲೂ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರಗಳು ಉಚಿತವಾಗಿ ವಿದ್ಯುತ್ ನೀಡುತ್ತಾ ಬಂದಿವೆ, ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಟರ್ ಅಳವಡಿಸಲು ಚಿಂತನೆ ನಡೆಸಿ ರೈತ ವಿರೋಧಿ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ, ಯಾವುದೇ ಕಾರಣಕ್ಕೂ ಹಾಕಲು ಬಿಡುವುದಿಲ್ಲ, ಇದಕ್ಕಾಗಿ ನಮ್ಮ ರಕ್ತ ಹರಿದರು ಚಿಂತೆ ಇಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಎಪಿಎಂಸಿ ಮೂರು ಕಾಯ್ದೆಗಳನ್ನು ಜಾರಿಗೆ ತಂದಿರುವ ನರೇಂದ್ರ ಮೋದಿಯವರು ಲಕ್ಷಾಂತರ ರೈತರ ನಿರಂತರ ಹೋರಾಟದಿಂದ ಎಚ್ಚೆತ್ತು ಕಾಯ್ದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಅಂಗೀಕೃತವಾಗಿಲ್ಲ. ಕೂಡಲೇ ರದ್ದುಪಡಿಸಬೇಕು, ರೈತರಿಗೆ ಅನ್ಯಾಯವಾಗುವುದು ತಡೆಯಬೇಕು, ಎಪಿಎಂಸಿ ಯಥಾವತ್ತಾಗಿ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಭೂಮಿಯಲ್ಲಿ ಕೃಷಿ ಮಾಡುವುದರಿಂದಲೇ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಆಹಾರ ಉತ್ಪಾಧನೆಯಾಗುತ್ತಿದೆ. ಆದರೆ ವರ್ಷವಿಡೀ ಇದನ್ನು ಬಿತ್ತನೆ ಮಾಡಿ, ಬೆಳೆಯುವ ರೈತರ ನೋವು ಕೇಳುವವರೇ ಇಲ್ಲವಾಗಿದೆ. ಈಗಿನ ದುಬಾರಿ ಬೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಿ ಜಮೀನಿಗೆ ಉಳುಮೆ ಮಾಡಲಾಗುತ್ತಿದೆ. ಕೊನೆಯಲ್ಲಿ ಉತ್ತಮ ಬೆಲೆ ಸಿಗದೇ ಸಾಲದ ಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೀನಾಯ ಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪ.ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಅಧಿಕಾರ ಪಡೆಯುವ ರಾಜಕಾರಣಿಗಳಿಗೆ ರೈತರ ನೋವುಗಳು ಕಣ್ಣಿಗೆ ಕಾಣುವುದಿಲ್ಲ. ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತ ಪ್ರತಿಯೊಂದು ಸಾಲ ಮಾಡಿ ಬೆಳೆಯ ನಿರೀಕ್ಷೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಾನೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಸಾಕಷ್ಟು ಹಾನಿಯಾದರೆ ಸರ್ಕಾರ ಕೆಲವರಿಗೆ ಮಾತ್ರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದರಿಂದ ಲಕ್ಷಾಂತರ ರೂಗಳ ಸಾಲ ಹೊರೆಯನ್ನು ರೈತ ಹೊತ್ತುಕೊಳ್ಳಬೇಕಾಗುತ್ತದೆ. ಇದೀಗ ಸರ್ಕಾರಗಳು ರೈತರ ವಿರುದ್ದವಾಗಿ ಕೈಗೊಳ್ಳುವ ಯೋಜನೆಗಳ ವಿರುದ್ದ ರೈತರು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬೇಡಿಕೆಗಳು:
ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ತೀರ್ಮಾನದಿಂದ ಹಿಂದೆ ಸರಿಯಬೇಕು.
ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿಗಳಿಗೆ ಯುನಿಟ್ ನಿಗದಿ ಮಾಡದೇ ಸಂಪೂರ್ಣ ಉಚಿತವಾಗಿ ನೀಡಬೇಕು, ಬಾಕಿ ಹಣವನ್ನು ರಾಜ್ಯ ಸರ್ಕಾರವೇ ತುಂಬಿಕೊಳ್ಳಬೇಕು.
ಕೃಷಿ ಪಂಪ್‌ಸೆಟ್‌ಗೆ ಕನಿಷ್ಠ ಹತ್ತು ತಾಸು ಪೂರೈಕೆ ಮಾಡಬೇಕು ಹಾಗೂ ಹಗಲಿನಲ್ಲಿಯೇ ವಿದ್ಯುತ್ ನೀಡಬೇಕು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕಾಧ್ಯಕ್ಷ ಪಿ. ಗಂಗಾಧರಪ್ಪ, ಗೌರವಾಧ್ಯಕ್ಷ ವೀರೇಶ್, ಪ್ರ. ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ಕಾರ್ಯದರ್ಶಿ ಟಿ.ಎಚ್ ಸಹದೇವ,ಹೋಬಳಿ ಅಧ್ಯಕ್ಷರಾದ ಎಂ. ಶರಣಪ್ಪ, ಕೆಂಚಪ್ಪ, ಪ್ರಹ್ಲಾದಪ್ಪ ಸೇರಿದಂತೆ ನೂರಾರು ರೈತರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!