ಸುದ್ದಿವಿಜಯ,ಜಗಳೂರು: ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊಡ ಮುಟ್ಟಿದ ಎಂಬ ಕಾರಣಕ್ಕೆ ಖಾಸಗಿ ಶಾಲೆಯೊಂದರ ಶಿಕ್ಷಕ ತೀವ್ರವಾಗಿ ಥಳಿತಕ್ಕೆ ಒಳಗಾಗಿದ್ದ 9 ವರ್ಷದ ದಲಿತ ಬಾಲಕ ಇತ್ತೀಚೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಘಟನೆಗೆ ಕಾರಣರಾದ ಶಿಕ್ಷಕನನ್ನು ಗಲ್ಲಿಗೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ವತಿಯಿಂದ ಜಗಳೂರಿನಲ್ಲಿ ಶನಿವಾರ ಪ್ರತಿಭಟನೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ದಲಿತ ಹೋರಾಟಗಾರ ಜಿ.ಎಸ್.ಶಂಭುಲಿಂಗಪ್ಪ, ಜುಲೈ 20ರಂದು ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಇಂದ್ರ ಮೇಘವಾಲ್ ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕಾಗಿ ಆತನ ಮೇಲೆ ಅದೇ ಶಾಲೆಯ ಶಿಕ್ಷಕ ಚೈಲ್ ಸಿಂಗ್ ತೀವ್ರವಾಗಿ ಹಲ್ಲೆ ನಡೆಸಿದ್ದ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಚಿಂತಕ, ವಕೀಲ ಓಬಳೇಶ್ ಮಾತನಾಡಿ, ಇದೊಂದು ಹೇಯ ಕೃತ್ಯ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದರು ದೇಶದಲ್ಲಿ ದಲಿತರಿಗೆ ರಕ್ಷಣೆಯಿಲ್ಲವಾಗಿದೆ. ಮನುವಾದಿಗಳು ಈ ದೇಶದಲ್ಲಿ ದಲಿತರನ್ನು ಬದುಕಲು ಬಿಡುತ್ತಿಲ್ಲ.
ದೀನದಲಿತ ಮತ್ತು ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತನಗೆ ತೀವ್ರ ನೋವುಂಟು ಮಾಡಿವೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಲೋಟ್ ಅವರಿಗೆ ದಲಿತರ ಮೇಲೆ ಕಾಳಜಿ ಇದ್ದರೆ ತಕ್ಷಣವೇ ಆ ಶಿಕ್ಷಕನ್ನು ಗಲ್ಲಿಗೇರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ದಲಿತ ಮುಖಂಡರಾದ ಗುರುಸಿದ್ದಪ್ಪ, ಶಿವಣ್ಣ, ಕುಬೇರಪ್ಪ ಸೇರಿದಂತೆ ಅನೇಕ ದಲಿತ ಹೋರಾಟಗಾರರು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಶನಿವಾರ ದಲಿತ ಹೋರಾಟಗಾರರು ಪ್ರತಿಭಟನೆ ನಡೆಸಿದರು.