ಸುದ್ದಿವಿಜಯ,ಜಗಳೂರು: ಶಾಂತಿಯಿಂದ ಮಾತ್ರ ಇಡೀ ದೇಹ ಮತ್ತು ದೇಶದಲ್ಲಿ ನೆಮ್ಮ ಸಾಧ್ಯ. ವೈರತ್ವವನ್ನು ನಿರ್ಮೂಲನೆ ಮಾಡುವ ಶಕ್ತಿ ರಕ್ಷಾಬಂಧನಕ್ಕಿದೆ ಎಂದು ರಾಜಯೋಗಿನಿ ಭಾರತಿ ಅಕ್ಕ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಿಂದ ಸುವರ್ಣ ಭಾರತದ ಕಡೆಗೆ ‘ಸ್ವರ್ಣಿಮ ಭಾರತ ನಿರ್ಮಾಣಕ್ಕಾಗಿ’ ಬೈಕ್ ರ್ಯಾಲಿ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೌತಿಕ ಜಗತ್ತಿನಲ್ಲಿ ಅಲೌಕಿಕ ಆನಂದವನ್ನು ಅನುಭವಿಸಬೇಕು. ಜಾತಿ, ವರ್ಗ, ಮತ ಭೇದವಿಲ್ಲದೇ ಎಲ್ಲರೂ ವಿಶ್ವದಾದ್ಯಂತ ರಾಜಯೋಗದ ಶಿಕ್ಷಣವನ್ನು ಈಶ್ವರೀಯ ವಿಶ್ವವಿದ್ಯಾಲಯ ನೀಡುತ್ತಿದೆ. ಆಧ್ಯಾತ್ಮದ ತವರು ಭಾರತದಲ್ಲಿ ಶಾಂತಿಯೇ ನಮ್ಮನ್ನೆಲ್ಲ ಕಾಪಾಡುತ್ತದೆ. ಇತಿಹಾಸ ಭವಿಷ್ಯವನ್ನು ನೆನಪಿಸುವಂತೆ ನಮ್ಮ ಭವಿಷ್ಯವನ್ನು ದ್ವೇಷದಿಂದ ಕಟ್ಟದೇ ಪ್ರೀತಿಯಿಂದ ಕಟ್ಟೊಣ ಎಂದರು.
ಪಿಎಸ್‍ಐ ಸಿ.ಎನ್. ಬಸವರಾಜ್ ಮಾತನಾಡಿ, ರಕ್ಷಾ ಬಂಧನದಿಂದ ಕಾಮನೆಗಳ ನಿರ್ಮೂಲನೆಯಾಗಿ ಹೆಣ್ಣನ್ನು ಮನೆಯ ಸಹೋದರಿಯರಂತೆ ನೋಡುವಂತಹ ಭಾವನೆ ಮೂಡುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ದೇಶದಲ್ಲಿ ಶಾಂತಿ ನೆಲೆಸಲು ಈಶ್ವರೀಯ ವಿದ್ಯಾನಿಲಯ ಜಾತಿ,ಮತ,ಧರ್ಮಗಳನ್ನು ನೋಡದೇ ಎಲ್ಲರೂ ಒಂದೇ ಎಂದು ಕಾಣುತ್ತಿರುವುದು ಮಾನತೆಗೆ ಸಾಕ್ಷಿ. ನಾವೆಲ್ಲರೂ ರಕ್ಷಾ ಬಂಧನದಿಂದ ಸಾಮರಸ್ಯ ಸಮಾಜ ಕಟ್ಟೋಣ ಎಂದರು.
ಬೈಕ್ ರ್ಯಾಲಿಯಲ್ಲಿ ಕಾರ್ಯನಿರತ ಪತ್ರಕರ್ತರು ಹಾಗೂ ಸಾರ್ವಜನಿಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತ್ರಿವರ್ಣ ದ್ವಜ ಕಟ್ಟಿಕೊಂಡು ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಅರಿವು ಮೂಡಿಸಿದರು.