ಸುದ್ದಿವಿಜಯ ವಿಶೇಷ- ಜಗಳೂರು: ಚಿತ್ರದುರ್ಗ-ದಾವಣಗೆರೆ ಗಡಿ ಗ್ರಾಮದ ಕೆರೆಯಾದ ಐತಿಹಾಸಿಕ ಹಿನ್ನೆಲೆಯುಳ್ಳ ಸಂಗೇನಹಳ್ಳಿ ಕೆರೆ ಕುಂಭದ್ರೋಣ ಮಳೆಯಿಂದ ಕೋಡಿಬಿದ್ದು ಅಪಾರ ಪ್ರಮಾಣದ ನೀರು ಧಾರಾಕಾರವಾಗಿ ಹರಿಯುತ್ತಿದೆ. ಕೋಡಿಬಿದ್ದ ಕರೆಯನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ನೀರಿನಲ್ಲಿ ಆಟವಾಡಿ ಜನರು ಸಂಭ್ರಮಿಸುತ್ತಿದ್ದಾರೆ.
ಸುಮಾರು 1200 ಎಕರೆ ವಿಸ್ತೀರ್ಣವಿರುವ ಈ ಕೆರೆ 15 ವರ್ಷಗಳ ಹಿಂದೆ ಕೋಡಿ ಬಿದ್ದಿತ್ತು. ಮಳೆಯಿಲ್ಲದೇ ಬರಗಾಲದಿಂದ ಮುರಭೂಮಿಯಂತಿದ್ದ ಕೆರೆಗೆ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಸಾಗರದಂತೆ ಭಾಸವಾಗುತ್ತಿದೆ. ಗುಹೇಶ್ವರನ ಗುಡ್ಡಕ್ಕೆ ಹೊಂದಿಕೊಂಡಿರುವ ಈ ಕೆರೆಯಿಂದ 4000 ಎಕೆರೆ ನೀರಾವರಿ ಸೌಲಬ್ಯವನ್ನು ಕಲ್ಪಿಸುತ್ತದೆ.
ಮೈಸೂರು ಸಂಸ್ಥಾನದಲ್ಲಿ ಸಚಿವರಾಗಿದ್ದ ಜಗಳೂರು ಇಮಾಮ್ ಸಾಬ್ ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾದ ಈಕೆರೆಯಿಂದ ಆಗ ಸಾವಿರಾರು ಹೆಕ್ಟೇರ್ ಭೂ ಪ್ರದೇಶಕ್ಕೆ ಕಾಲುವೆಗಳ ಮೂಲಕ ನೀರು ಹರಿಯುತ್ತಿತ್ತು. ಕಳೆದ ನಾಲ್ಕು ದಶಕಗಳಿಂದ ಕೆರೆಗೆ ನೀರಿನ ಮೂಲ ಬಂದ್ ಆದ ಮೇಲೆ ಕಾಲುವೆಗಳ ಮೂಲಕ ನೀರು ಹರಿಸುವುದು ನಿಂತು ಜೊಂಡು ಹುಲ್ಲು ಬಳೆದು ಕಾಲುವೆಗಳೆಲ್ಲವೂ ಮಣ್ಣು ಮುಚ್ಚಿ ಬಂದ್ ಆಗಿವೆ.
ಕುದುರೆ ಲಾಳಾಕಾರದ ಕೋಡಿ:
ಈ ಕೆರೆಯ ಕೋಡಿ ಮತ್ತೊಂದು ವಿಶೇಷ ವೇನೆಂದರೆ ಕುದುರೆ ಲಾಳಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಕೋಡಿ ಮೂಲಕ ಹರಿಯುವ ನೀರನ್ನು ನೋಡಲು ಸುತ್ತಮುತ್ತಲ 40ಕ್ಕೂ ಹೆಚ್ಚು ಹಳ್ಳಿಯ ಜನ ಬಂದು ಹೋಗುತ್ತಿದ್ದಾರೆ. ಈ ಮನೋಹರ ದೃಶ್ಯ ನೋಡುಗರಿ ಮುದ ನೀಡುತ್ತಿದೆ.
ನೀರಿನ ಸೌಲಭ್ಯ ಪಡೆಯುವ ಹಳ್ಳಿಗಳು: ಸೋಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಈ ಕೆರೆಯಿಂದ ಎರಡೂ ಜಿಲ್ಲೆಗಳ ಜನ ಇದರ ಉಪಯೋಗ ಪಡೆಯುತ್ತಿದ್ದಾರೆ. ಗೌರಮ್ಮನಹಳ್ಳಿ, ಸಂಗೇನಹಳ್ಳಿ, ಗುಹೇಶ್ವರನಹಳ್ಳಿ, ತೋರಣಗಟ್ಟೆ, ನಿಬಗೂರು, ಕಟ್ಟಿಗೆಹಳ್ಳಿ, ಜಮ್ಮಾಪುರ, ಬೊಮ್ಮಗಟ್ಟ, ಬೆಣೆಹಳ್ಳಿ, ದ್ಯಾಮಲಿಂಗನಹಳ್ಳಿ, ದೊಣೆಹಳ್ಳಿ, ಮೂಡಲ ಮಾಚಿಕೆರೆ, ಚಿತ್ರದುರ್ಗ ಜಿಲ್ಲೆಯ ಚಿಕ್ಕಗೊಂಡನಹಳ್ಳಿ ಮುಸ್ಟೂರು, ಸಿದ್ದಿಹಳ್ಳಿ, ತೊರೆಸಾಲಿನ ಹಳ್ಳಿಗಳು ಸೇರಿದಂತೆ ಅನೇಕ ಗ್ರಾಮಗಳ ಜನರು ಅಂತರ್ಜಲದ ಮೂಲಕ ಈ ಕೆರೆಯ ನೀರನ್ನು ಬಳಸುತ್ತಿದ್ದಾರೆ.
ಅಡಕೆ ಸಸಿಗಳ ನಾಟಿ ಹೆಚ್ಚಳ: ಸಂಗೇನಹಳ್ಳಿ ಕೆರೆ ತುಂಬಿದರೆ ಕನಿಷ್ಟ ಎರಡು ವರ್ಷ ನೀರಿಗೆ ಬರವಿಲ್ಲ ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಜನರು ಈ ಬಾರಿ 1000 ಎಕರೆಗೂ ಹೆಚ್ಚು ಅಡಕೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಜೊತೆಗೆ ಶೇಂಗಾ, ಸೂರ್ಯಕಾಂತಿ, ಬಾಳೆ, ಕಡಲೆ, ಮೆಕ್ಕೆಜೋಳದ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗಿದೆ.
ಅಪ್ಪರ್ ಭದ್ರಾ ಯೋಜನೆ ಮೂಲ ಕೆರೆ:
ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಸಂಗೇನಹಳ್ಳಿಗೆ ಮೊದಲು ಹರಿಯುತ್ತಿದೆ. ನಂತರ ಉಳದಿ 9 ಕೆರೆಗಳಿಗೆ ನೀರು ಇದೇ ಕೆರೆಯ ಮೂಲಕ ಹರಿದು ಸಾಗುತ್ತದೆ. ಹೀಗಾಗಿ ಈ ಭಾಗದ ರೈತರಿಗೆ ಈ ಕೆರೆ ಜೀವನಾಡಿಯಾಗಿದ್ದು ಕೆರೆ ತುಂಬಿರುವ ಕಾರಣ ಅನ್ನದಾತರ ಮುಖದಲ್ಲಿ ಸಂತೋಷ ಇಮ್ಮಡಿಯಾಗಿದೆ. ಈ ಕೆರೆ ತುಂಬಿದ ನೀರು ಐತಿಹಾಸಿ ಕಲ್ಲೇದೇವರ ಪುರದ ಶ್ರೀ ಕಲ್ಲೇಶ್ವರ ಸ್ವಾಮಿಯ ಲಿಂಗಕ್ಕೆ ಅಭಿಷೇಕವಾಗುವುದು ಮತ್ತೊಂದು ವಿಶೇಷವಾಗಿದೆ.
ನಾವು ಚಿಕ್ಕವರಿದ್ದಾಗ ಅತ್ಯಂತ ಸಮೃದ್ಧವಾಗಿ ಹರಿಯುತ್ತಿದ್ದ ಸಂಗೇನಹಳ್ಳಿ ಕೆರೆ ಕೋಡಿಬಿದ್ದಾಗ ನೋಡಲು ಸಂತೋಷವಾಗುತ್ತಿತ್ತು. ಆದರೆ ಕಳೆದ 15 ವರ್ಷಗಳಿಂದ ಕೆರೆಯಲ್ಲಿ ನೀರು ಇಲ್ಲದೇ ಮರುಭೂಮಿಯಂತಾಗಿತ್ತು. ಈಗ ನೀರು ನೋಡಿ ಸಂತೋಷವಾಗುತ್ತಿದೆ. ರೈತರಿಗೆ ಸಂತೋಷ ತಂದಿದೆ.
-ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರು, ಕಲ್ಲೇದೇವರಪುರ
ಈ ಕೆರೆ ತುಂಬಿದರೆ 10 ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಸಂಗೇನಹಳ್ಳಿ ಕೆರೆ ತುಂಬಿದರೆ ಅನ್ನದಾತರಿಗೆ ಹೊನ್ನಿನ ಬೆಳೆ ಬಂದಂತೆ. ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯಲು ಈ ಕೆರೆ ಸಹಕಾರಿಯಾಗುತ್ತದೆ. ಕೋಡಿ ಬಿದ್ದ ಕೆರೆ ನೋಡಿ ಸಂತೋಷವಾಯಿತು.
ರಾಜು, ಗಿರೀಶ್, ಅರಿಶಿಣಗುಂಡಿ ಗ್ರಾಮಸ್ಥರು.