ಸುದ್ದಿವಿಜಯ, ಜಗಳೂರು: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರನ್ನು ದೇವಸ್ಥಾನಗಳ ಒಳಗೆ ಬಿಡುತ್ತಿಲ್ಲ. ಹೀಗಾಗಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು ದಲಿತರನ್ನು ಪಶುಗಳಿಗಿಂತಲೂ ಕಡೆಯಾಗಿ ನೋಡುತ್ತಿದ್ದಾರೆ. ನಮ್ಮನ್ನೂ ಮನುಶ್ಯರಂತೆ ನೋಡಬೇಕಾದರೆ ಕಾನೂನು ಅಡಿ ದಿಟ್ಟ ಕ್ರಮ ಕೈಗೊಳ್ಳಿ ಎಂದು ದಲಿತ ಮುಖಂಡ ಬಿಳಿಚೋಡು ಗ್ರಾಮದ ಪಿ. ಹಾಲೇಶ್ ಎಎಸ್‍ಪಿ ಕನ್ನಿಕ ಸಿಕ್ರಿವಾಲ್ ಅವರಲ್ಲಿ ಮನವಿ ಮಾಡಿದರು.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಎಸ್‍ಪಿ ಕನ್ನಿಕ ಸಿಕ್ರಿವಾಲ್ ನೇತೃತ್ವದಲ್ಲಿ ನಡೆದ ಎಸ್‍ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರಿಂದ ದಲಿತರಿಗೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ತಾಲೂಕಿನ ಕಲ್ಲೇದೇವರಪುರ, ಸೊಕ್ಕೆ, ಸಿದ್ದಿಹಳ್ಳಿ, ಹಾಲೇಕಲ್ಲು, ಕೆಚ್ಚೇನಹಳ್ಳಿ, ಗಡಿಮಾಕುಂಟೆ, ಲಿಂಗಣ್ಣನನಹಳ್ಳಿ, ಕ್ಯಾಸೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ದಲಿತರನ್ನು ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.
ಕ್ಷೌರ ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದಲಿತ ಮೇಲೆ ಜಾತಿನಿಂದನೆ, ಅಸ್ಪೃಶ್ಯತೆ, ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿವೆ ದಲಿತರಿಗೆ ರಕ್ಷಣೆ ಕೊಡಿ ಎಂದು ಹೇಳಿದರು.
ತಕ್ಷಣ ಪ್ರತಿಕ್ರಿಯೆ ನೀಡಿದ ಎಎಸ್‍ಪಿ ಕಿನ್ನಿಕಾ ಸಿಕ್ರಿವಾಲ್ ಇದು ಗಂಭೀರ ವಿಷಯವಾಗಿದ್ದು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯಮಾರಾಟದಿಂದ ದಲಿತರು ಹಾಳಾಗುತ್ತಿದ್ದಾ ಇದನ್ನು ಕ್ರಮ ಕೈಗೊಳ್ಳಿ ಜೊತೆಗೆ ಗ್ರಾಮಗಳಲ್ಲಿ ದಲಿತರಿಗೆ ಕ್ಷೌರನಿರಾಕಣೆ ಮಾಡಲಾಗುತ್ತಿದೆ ಎಂದು ಸಿದ್ದಪ್ಪ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕನ್ನಿಕಾ ಸಿಕ್ರಿವಾಲ್ ಅಂತಹ ಪ್ರಕರಣಗಳಿದ್ದರೆ ನೇರವಾಗಿ ನನಗೆ ಕರೆ ಮಾಡಿ ಎಂದರು.
ಪಿ. ಹಾಲೇಶ್ ಮಾತನಾಡಿ, ದಲಿತರು ದೇವಸ್ಥಾನಗಳ ಮುಂದೆ ಕಸ ಗುಡಿಸುವ ಕೆಲಸ ಸೇರಿ ಎಲ್ಲ ಕೆಲಸವನ್ನು ಮಾಡುತ್ತೇವೆ ಆದರೆ ದೇವಳದ ಒಳಗೆ ಬಿಡಲು ಬಲಿತ ಸಮುದಾಯ ನಿರಾಕರಿಸುತ್ತಿದೆ. ಬಿಳಿಚೋಡು ಹೊರತು ಪಡಿಸಿ ಎಲ್ಲ ಗ್ರಾಮಗಳಲ್ಲಿ ನಡೆಯುತ್ತಿದೆ. ಬಿದರಕೆರೆ ಗ್ರಾಮದಲ್ಲಿ ಮೊನ್ನೆಯಷ್ಟೇ ಎಸ್‍ಸಿ-ಎಸ್ಟಿ ಸಮುದಾಯಗಳ ಮಧ್ಯೆ ಗ್ಯಾಸ್ ವಿಚಾರಕ್ಕೆ ಜಗಳವಾಗಿತ್ತು.
ಆದರೆ ಗ್ರಾಮದ ಮುಖಂಡರನ್ನು ಕರೆದು ಬುದ್ದಿ ಹೇಳಬೇಕು. ಅಂತಹ ಮುಖಂಡರಿಗೆ ಜೈಲಿಗೆ ಕಳುಹಿಸುವ ಹುನ್ನಾರ ನಮ್ಮದಲ್ಲ. ಆದರೆ ಇಂತಹ ಘಟನೆಗಳು ಮರುಕಳಿಸಬಾರದು. ದಲಿತರು ಹೊಡೆಸಿಕೊಂಡಿರುವ ಇತಿಹಾಸವಿದೆ ಆದರೆ ಹೊಡೆದ ಇತಿಹಾಸವಿಲ್ಲ.
ನಾಯಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಾರೆ ಆದರೆ ನಾವು ಸ್ನಾನಮಾಡುತ್ತೇವೆ. ಆದರೂ ನಮ್ಮನ್ನೇಕೆ ಇಷ್ಟು ನಿಕೃಷ್ಟವಾಗಿ ನೋಡಲಾಗುತ್ತಿದೆ ಇಂತಹ ಘಟನೆಗಳು ನಿಲ್ಲಬೇಕು ಎಂದರು.
ಗ್ಯಾಸ್ ಓಬಣ್ಣ ಮಾತನಾಡಿ, ದಲಿತರ ಮೇಲೆ ಆಗುತ್ತಿರುವ ದಬ್ಬಾಳಿಕೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಬೀದಿ ನಾಟಗಳನ್ನು ಇಲಾಖೆವತಿಯಿಂದ ಆಯೋಜನೆ ಮಾಡಿ ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.
ಎಲ್ಲ ದಲಿತ ಮುಖಂಡರಿಗೆ ಪ್ರತಿಕ್ರಿಯೆ ನೀಡಿದ ಎಎಸ್‍ಪಿ ಕನ್ನಿಕಾ ಸಿಕ್ರಿವಾಲ್, ಪ್ರತಿ ತಿಂಗಳು ಎರಡನೇ ಭಾನುವರ ಬೆಳಿಗ್ಗೆ 11 ಗಂಟೆಗೆ ಎಸ್‍ಸಿ ಎಸ್ಟಿ ಕುಂದು ಕೊರತೆ ಸಭೆ ತಪ್ಪದೆ ಸಭೆ ನಡೆಸುತ್ತೇವೆ. ನಿಮ್ಮ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಏನೇ ಸಮಸ್ಯೆಗಳಿಗಿದ್ದರೂ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಗಮನಕ್ಕೆ ತನ್ನಿ ಎಂದು ಹೇಳಿದರು.
ಸಭೆಯಲ್ಲಿ ಸಿಪಿಐ ಸತ್ಯನಾರಾಯಣ ಸ್ವಾಮಿ, ಪಿಎಸ್‍ಐ ಓಂಕಾರನಾಯ್ಕ, ಬಸವರಾಜ್, ಡಿ.ಸಾಗರ್, ಗ್ಯಾಸ್ ಓಬಣ್ಣ, ಬಿ.ಲೋಕೇಶ್, ಟಿ.ಬಸವರಾಜ್, ಶಂಕರ್ ನಾಯ್ಕ, ವಕೀಲರಾದ ಟಿ.ಬಸವರಾಜ, ಹನುಮಂತಪ್ಪ, ದೇವೇಂದ್ರಪ್ಪ, ಸಿದ್ದಪ್ಪ, ಓಬಳೇಶ್, ನಾಗಲಿಂಗಪ್ಪ, ಹನುಮಂತಪ್ಪ, ಸತೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.