ಸುದ್ದಿವಿಜಯ, ಜಗಳೂರು: ಇಂಡಿಯನ್ ಕೌನ್ಸಿಲ್ ಫಾರ್ ಚಿಲ್ಡ್ರನ್ ವೆಲ್ಫೇರ್ ವತಿಯಿಂದ ನೀಡುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಜಗಳೂರು ಪಟ್ಟಣದ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ಇದೇ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಪಟ್ಟಣದ ಎನ್‍ಎಂಕೆ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಕೀರ್ತಿ ವಿವೇಕ್ ಸಾಹುಕಾರ್, ಕಾರು ಅಪಘಾತದಲ್ಲಿ ಕುಟುಂಬವನ್ನು ರಕ್ಷಿಸಿದ್ದ. ತಂದೆ ಮಂಜುನಾಥ್ ಸಾಹುಕಾರ್ ಜಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ತಾಯಿ ಶ್ರುತಿ ಇವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಶೌರ್ಯಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಎನ್‍ಎಂಕೆ ಶಾಲೆಯ ಕಾರ್ಯದರ್ಶಿ ಎಂ.ಎಂ.ಲೋಕೇಶ್ ಅಭಿನಂದನೆ ತಿಳಿಸಿದ್ದಾರೆ.
ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಹೇಗೆ?
ಕಳೆದ ವರ್ಷ ಆಗಸ್ಟ್ 21 ರಂದು ಕುಟುಂಬ ಸಮೇತ ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ತಂದೆ ಮಂಜುನಾಥ್ ಅವರು ಜಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋರಟಿದ್ದರು. ಬೆಳಗಿನ ಜಾವವಾಗಿದ್ದರಿಂದ ನಾಯಿ ಅಡ್ಡ ಬಂದಿದ್ದನ್ನು ತಪ್ಪಿಸಲು ಹೋದಾಗ ಕಾರು ಪಲ್ಟಿ ಆಯ್ತು.
ಕಾರಿನ ಡೋರ್‍ಗಳು ಲಾಕ್ ಆಗಿದ್ದವು. ಅದರಲ್ಲಿದ್ದ ತಾಯಿ ಶ್ರುತಿ ಅವರಿಗೆ ಕೈ ಮೂಳೆ ಮುರಿದಿತ್ತು. ತಂದೆಯ ಸೊಂಟಕ್ಕೆ ಬಲವಾದ ಏಟು ಬಿದ್ದಿತ್ತು. ತಂಗಿ ಸಾತ್ವಿಕಾಗೆ ಕಾರಿನ ಗ್ಲಾಸ್‍ಗಳು ಚುಚ್ಚಿ ನರಳುತ್ತಿದ್ದರು.
ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಅವರಿಗೂ ಗ್ಲಾಸ್‍ಗಳು ಚುಚ್ಚಿ ಕೈಗಳು ಗಾಯಗಳಾಗಿದ್ದವು. ಆದರೂ ಎದೆ ಗುಂದದೇ ಮೆಟಲ್ ಬಾಟಲಿಯಿಂದ ವಿಂಡ್ ಶೀಲ್ಡ್ ಗ್ಲಾಸ್ ಒಡೆದು ತಂಗಿಯನ್ನು ಮೊದಲು ರಕ್ಷಿಸಿದರು. ನಂತರ ತಾಯಿಯನ್ನು ನಿಧಾನವಾಗಿ ಹೊರ ಕರೆದುಕೊಂಡು ಬಂದರು.
ನಂತರ ತಂದೆಯನ್ನು ಹೊರಗೆ ಕರೆತಂದು ಪೆÇಲೀಸ್ ಮತ್ತು ಅಂಬುಲೆನ್ಸ್‍ಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿ ಎಲ್ಲರನ್ನೂ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರು.
ಈ ವಿಷಯವನ್ನು ಮಂಜುನಾಥ್ ಅವರು ಸ್ನೇಹಿತರೊಂದಿಗೆ ಹಂಚಿಕೊಂಡರು. ಸ್ನೇಹಿತರ ಸಲಹೆ ಮೇರೆಗೆ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಅಪ್ಲೇ ಮಾಡಿ ಎಂದಾಗ ನಿಯಮಗಳ ಅನುಸಾರ ಸರಕಾರಕ್ಕೆ ಅರ್ಜಿಸಲ್ಲಿಸಿದರು.
ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಅವರ ಶೌರ್ಯವನ್ನು ಮೆಚ್ಚಿ ರಾಜ್ಯ ಸರಕಾರ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮಕ್ಕಳ ದಿನಾಚರಣೆಯಂದ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಬಾರಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಕೀರ್ತಿ ವಿವೇಕ್ ಎಂ.ಸಾಹುಕಾರ್ ಆಯ್ಕೆಯಾಗಿದ್ದು ತಾಲೂಕಿನ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿರುವುದು ಸಾಧನೆ ಸರಿ.
ಬಾಲಕನ ಸಾಧನೆಗೆ ಶಾಸಕರ ಮೆಚ್ಚುಗೆ:
ಮಾಸ್ಟರ್ ಕೀರ್ತಿ ವಿವೇಕ್ ಎಂ ಸಾಹುಕಾರ್ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಬಂದಿದ್ದಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಅಭಿನಂದಿಸಿದರು. ಶುಕ್ರವಾರ ಶಾಸಕರನ್ನು ಭೇಟಿಯಾದ ವಿದ್ಯಾರ್ಥಿಗೆ ರಾಮಚಂದ್ರ ಅಭಿನಂದನೆ ಸಲ್ಲಿಸಿದರು. ಇನ್ನು ಎತ್ತರಕ್ಕೆ ಬೆಳೆದು ತಾಲೂಕಿನ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತೆ ಪ್ರೋತ್ಸಾಹಿಸಿದರು.