ಸುದ್ದಿವಿಜಯ,ಜಗಳೂರು (ವಿಶೇಷ): ಅಕೆ ಕಡುಬಡವಿ.. ಒಲವೇ ನಮ್ಮ ಬದುಕು ಎಂಬಂತೆ ಇದ್ದದ್ದರಲ್ಲೇ ಜೀವನ ನಡೆಸುತ್ತಿರುವ ಮಹಿಳೆ ಗೌರಮ್ಮ. ವಸತಿ ರಹಿತರಿಗೆ ಸರ್ಕಾರ ಗ್ರಾಪಂಗಳ ಮೂಲಕ ಸಾಕಷ್ಟು ಮನೆಗಳನ್ನು ಮಂಜೂರು ಮಾಡಿದೆ ಎಂದು ಕಾಗದದಲ್ಲಿ ತೋರಿಸುತ್ತಿದೆ. ಆದರೆ ಈ ವೃದ್ದೆ ಎರಡು ವರ್ಷಗಳಿಂದ ಸೂರಿಗಾಗಿ ಅಲೆದಾಡಿ ಸೊರಗಿ ಹೋಗಿದ್ದಾಳೆ.
ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ವೃದ್ದೆ ಗೌರಮ್ಮ ವಸತಿ ವಂಚಿತೆ, ಕಳೆದ ಎರಡು ವರ್ಷಗಳ ಹಿಂದೆ ಮಳೆಗೆ ತನಗಿದ್ದ ಮನೆ ಮುರಿದು ಬಿದ್ದಿದೆ. ಮುಂಭಾಗದಲ್ಲಿರುವ ಗೋಡೆಯಲ್ಲಿ ಮಗನೊಂದಿಗೆ ಜೀವನ ನಡೆಸುತ್ತಿದ್ದಾಳೆ. ಮನೆ ಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅಲೆದಾಡಿ ಸಾಕಾಗಿದ್ದಾರೆ.
ಎರಡು ವರ್ಷಗಳಾದರೂ ಈ ಭಾಗದ ಚುನಾಯಿತ ಪ್ರತಿನಿದಿಗಳಾಗಲೀ ಅಥವಾ ಗ್ರಾ.ಪಂ ಅಧಿಕಾರಿಗಳಾಗಲೀ ಇತ್ತ ಗಮನಹರಿಸದೇ ನಿರ್ಲಕ್ಷ ತೋರಿದ್ದಾರೆಂದು ವೃದ್ದೆ ಗೌರಮ್ಮ ದೂರಿದ್ದಾರೆ.
ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಲ್ಲನಹೊಳೆ ದೊಡ್ಡ ಗ್ರಾಮ. ಪ್ರತಿ ವರ್ಷ ನೂರಾರು ಮನೆಗಳು ಮಂಜೂರಾದರೂ ಇಂತಹ ಬಡ ವೃದ್ದೆಗೆ ಮನೆ ನಿರ್ಮಿಸಿಕೊಡಲು ಸಾದ್ಯವಾಗಿಲ್ಲ. ಇದು ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ:
ರೈತಸಂಘದ ಜಿಲ್ಲಾ ಕಾರ್ಯದರ್ಶಿ ಚಿರಂಜೀವಿ ವೃದ್ದೆಯ ಪರಿಸ್ಥಿತಿಯ ಬಗ್ಗೆ ತಹಸೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಮನವರಿಕೆ ಮಾಡಿದರು. ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಮನೆ ಕುಸಿದುಬಿದ್ದು ವರ್ಷಗಳಾಗಿವೆ ಹಾಗಾಗಿ ಕಂದಾಯ ಇಲಾಖೆಯಿಂದ ಪರಿಹಾರ ಕೊಡಲು ಸಾದ್ಯವಾಗುವುದಿಲ್ಲ. ಗ್ರಾಮ ಪಂಚಾಯಿತಿಯ ಮೂಲಕವಾಗಿ ಹೊಸ ಮನೆ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು, ಯಾವುದೇ ಭಯ ಬೇಡ ನಿಮ್ಮ ಜತೆ ನಾವಿದ್ದೇವೆ ಸಾದ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಬಡವರು, ನಿರ್ಗತಿಕರು, ವಸತಿ ರಹಿತರನ್ನು ಗುರುತಿಸಿ ಮನೆ ನೀಡಬೇಕಾದ ಅಧಿಕಾರಿಗಳು ಉಳ್ಳವರಿಗೆ ಮನೆ ನೀಡುತ್ತಿರುವುದು ಯಾವ ನ್ಯಾಯ, ವೃದ್ದೆ ಗೌರಮ್ಮ ಎರಡು ವರ್ಷಗಳಿಂದಲೂ ಗ್ರಾ.ಪಂ ಓಡಾಡುತ್ತಿದೆ. ಅಧಿಕಾರಿಗಳಿಗೆ ಅರ್ಜಿ ಕೊಟ್ಟಿದ್ದಾರೆ. ಗೋಳಾಡಿದ್ದಾರೆ. ಮಾನವೀಯತೆ ಇಲ್ಲದೆ ಅಲೆದಾಡಿಸಿದ್ದಾರೆ. ಈಗ ಮಳೆಗಾಲ ಹಗಲಿನಲ್ಲಿ ಹೇಗೋ ಜೀವಿಸುತ್ತಾಳೆ, ರಾತ್ರಿ ವೇಳೆ ಏನು ಮಾಡಲು ಸಾದ್ಯ. ಸ್ವಾತಂತ್ರ ಅಮೃತ ಮಹೋತ್ಸದಲ್ಲಿ ಬಡ ಮಹಿಳೆಗೆ ಸ್ವಾತಂತ್ರವಿಲ್ಲ.
-ಚಿರಂಜೀವಿ, ಹೋರಾಟಗಾರ, ರೈತ ಸಂಘ