ಸುದ್ದಿವಿಜಯ,ಜಗಳೂರು:ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕೆ.ಎಚ್.ಚಂದ್ರಶೇಖರಪ್ಪ ಎಂಬುವರ ಮನೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಳ್ಳರು ಮನೆಯ ಬಾಗಿಲು ಮುರಿದು,ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಕಟ್ಟಿಗೆಹಳ್ಳಿ ಗ್ರಾಮದವರಾದ ಕೆ.ಎಚ್.ಚಂದ್ರಶೇಖರಪ್ಪ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದಾರೆ.ಸಿವಿಲ್ ಕಾಂಟ್ಯಾಕ್ಟರ್ ಆಗಿದ್ದಾರೆ.ಕಟ್ಟಿಗೆಹಳ್ಳಿ ಗ್ರಾಮದಲ್ಲಿ ವಾಸಕ್ಕೆಂದು ಕಳೆದ ವರ್ಷವಷ್ಟೇ ಬೃಹತ್ ಮನೆ ನಿರ್ಮಿಸಿದ್ದರು. ಅಗಾಗ್ಗೆ ಬೆಂಗಳೂರಿನಿಂದ ಹಳ್ಳಿಯಲ್ಲಿರು ತಮ್ಮ ಮನೆಗೆ ಬಂದು ಹೋಗುತ್ತಿದ್ದರು.
ಭಾನುವಾರ ಗ್ರಾಮಕ್ಕೆ ಬರುತ್ತೇನೆ ಮನೆ ಸ್ವಚ್ಛಗೊಳಿಸಿ ಎಂದು ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ಸ್ವಚ್ಛಗೊಳಿಸಲು ಮನೆ ಕೆಲಸದ ಮಹಿಳೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತು.
ತಕ್ಷಣ ಮಾಲೀಕರಾದ ಚಂದ್ರಶೇಖರಪ್ಪ ಅವರಿಗೆ ಕರೆ ಮಾಡಿ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದರೆ. ಸಂಬಂಧಿಕರು ಬಂದು ವೀಕ್ಷಿಸಿದಾಗ ದೇವರ ಮನೆಯಲ್ಲಿದ್ದ ಬೆಳ್ಳಿಯ ಬಸವಣ್ಣನ ವಿಗ್ರಹಗಳು ಸೇರಿದಂತೆ ಅಂದಾಜು ಎರಡು ಕೆಜಿ ತೂಕದ ಎರಡು ಲಕ್ಷ ರೂ ಮೌಲ್ಯದ ವಸ್ತುಗಳು, ರೇಷ್ಮೆ ಸೀರೆಗಳು ಬೆಲೆಬಾಳುವ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಮಹೇಶ್ ಹೊಸಪೇಟ ಸೇರಿಂದತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.