ಸುದ್ದಿವಿಜಯ,ಜಗಳೂರು: ಕಳೆದ 12 ವರ್ಷದಿಂದ ಪಟ್ಟಣದಲ್ಲಿ ರಸ್ತೆ, ಚರಂಡಿ ಸ್ವಚ್ಛಗೊಳಿಸುತ್ತೇವೆ ಅಷ್ಟೇ ಅಲ್ಲ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತೇವೆ. ನಸುಕಲ್ಲೇ ಎದ್ದು ರಸ್ತೆಗಳನ್ನು ಗುಡಿಸ್ತೇವೆ. ಆದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಮ್ಮನ್ನು ಕಾಯಂಗೊಳಿಸಿಲ್ಲ. ಸಂಬಳವೂ ಕೊಟ್ಟಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರ ಎದುರು 10 ಜನ ದಿನಗೂಲಿ ಪೌರಕಾರ್ಮಿಕರು ಕಣ್ಣೀರು ಹಾಕಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಸೋಮವಾರ ಭೇಟಿ ನೀಡಿ ದಿನಗೂಲಿಗಳ ಸಮಸ್ಯೆಗಳನ್ನು ಆಲಿಸಿದ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
12 ವರ್ಷದಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಮನೆಮನೆ ಕಸ ಸಂಗ್ರಹಕ್ಕೆ ತೆರಳಿ ಅವರು ಕೊಡೋ ಹದಿನೈದೋ, ಇಪ್ಪತ್ತೋ ರೂಪಾಯಿ ಪಡೆದು ಕಡುಕಷ್ಟದಲ್ಲಿ ಜೀವನ ನಡೆಸುತ್ತೇವೆ.
ಇದುವರೆಗೂ ಸಂಬಳ ಕೊಟ್ಟಿಲ್ಲ. ಕೇಳಿದರೆ, ಸುಮ್ಮನೇ ಕೆಲಸ ಮಾಡಿದರೆ ಸರಿ, ಇಲ್ಲದಿದ್ದರೆ ಕೆಲಸದಿಂದ ಕಿತ್ತುಹಾಕುತ್ತೇನೆ ಎಂದು ಆರೋಗ್ಯ ನಿರೀಕ್ಷಕರು ಗದರಿಸಿ ನಮ್ಮ ಬಾಯಿ ಮುಚ್ಚಿಸುತ್ತಾರೆ ಎಂದು ಕಾರ್ಮಿಕರಾದ ಗೀತಮ್ಮ, ತಿಪ್ಪಮ್ಮ, ರೇಣುಕಮ್ಮ, ಮಹಾಲಕ್ಷ್ಮೀ, ಕರಿಬಸಮ್ಮ, ವೀರೇಶ್ ಬಾಬು, ಬಸಮ್ಮ ಅಧ್ಯಕ್ಷರ ಎದುರು ತಮ್ಮ ಅಳಲು ತೋಡಿಕೊಂಡರು.
ಪಪಂನ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬದವರನ್ನೇ ಪ್ರತಿ ಮನೆಗೆ 3-4 ಜನರಂತೆ ಪೌರಕಾರ್ಮಿಕರ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದು, 12 ವರ್ಷದಿಂದ ಸಂಬಳ ಇಲ್ಲದೆ ಕೆಲಸ ಮಾಡಿದ ನಮಗೆ ತೀವ್ರ ಅನ್ಯಾಯ ಮಾಡಿದ್ದಾರೆ. ಕೆಲಸವನ್ನು ಕಾಯಂ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಹಾಜರಾತಿ ಪುಸ್ತಕ ಸೇರಿ ಯಾವುದೇ ದಾಖಲೆಯಲ್ಲೂ ನಮೂದಿಸುತ್ತಿಲ್ಲ.
12 ವರ್ಷದಿಂದ ಇಲ್ಲೇ ಇರುವ ಆರೋಗ್ಯ ನಿರೀಕ್ಷಕ ಕಿಫಾಯತ್ ನಮಗೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಗೋಗರೆದ ದಿನಗೂಲಿ ಕಾರ್ಮಿಕರು ಅನೇಕ ವರ್ಷದಿಂದ ಕಣ್ಣೀರಲ್ಲೇ ಕೈತೊಳೆದಿದ್ದೇವೆ. ನಮ್ಮ ಸಮಸ್ಯೆ ಕೇಳುವವರೇ ಇಲ್ಲ. ದಯವಿಟ್ಟು ವಿಷ ಕೊಟ್ಟುಬಿಡಿ, ಇಲ್ಲೇ ಜೀವ ಬಿಟ್ಟುಬಿಡುತ್ತೇವೆ ಎಂದು ನೋವಿನ ಆಕ್ರಂದನ ವ್ಯಕ್ತಪಡಿಸಿದರು.
ಹಾಗೆಲ್ಲಾ ವಿಷ ಕುಡಿಯುವ ಮಾತನಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಎಲ್ಲಾ ತಾರತಮ್ಯಗಳನ್ನು ಕೊನೆಗಾಣಿಸಿ, ನ್ಯಾಯ ಕೊಡಿಸಲಾಗುತ್ತದೆ ಎಂದು ಶಿವಣ್ಣ ಭರವಸೆ ನೀಡಿದರು.
ಪ್ರಧಾನ ಮಂತ್ರಿ ಗಳು ಪೌರಕಾರ್ಮಿಕರ ಬಗ್ಗೆ ಕಾಳಜಿ ಹೊಂದಿದ್ದು, ಸಾಕಷ್ಟು ಸವಲತ್ತು ಕಲ್ಪಿಸಿದ್ದಾರೆ. 11 ವರ್ಷದ ಹಿಂದೆಯೇ ದಿನಗೂಲಿ ಪೌರಕಾರ್ಮಿಕರಿಗೆ ಸಂಬಳ ನೀಡುವಂತೆ ಜಿಲ್ಲಾಧಿಕಾರಿಗಳ ಆದೇಶ ಇದೆ.
ನೀವು ಯಾಕೆ ಸಂಬಳ್ಳ ಕೊಟ್ಟಿಲ್ಲ. 12 ವರ್ಷದಿಂದ ನೀನು ಇಲ್ಲೇ ಬೀಡುಬಿಟ್ಟಿದ್ದೀಯಾ. ಕಾರ್ಮಿಕರಿಗೆ ನ್ಯಾಯಯುತ ಸವಲತ್ತು ನೀಡದೆ ಸತಾಯಿಸಿದರೆ ನಿನ್ನನ್ನು ಸೇವೆಯಿಂದ ಅಮಾನತು ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಶಿವಣ್ಣ ಅವರು ಆರೋಗ್ಯ ನಿರೀಕ್ಷಕ ಕಿಫಾಯತ್ ಅವರಿಗೆ ಅಧ್ಯಕ್ಷರು ಕಟುವಾಗಿ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಮುಖ್ಯಾಧಿಖಾರಿ ಲೋಕ್ಯಾನಾಯ್ಕ, ತಾಲ್ಲೂಕು ಪಂಚಾಯಿತಿ ಇಓ ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಇದ್ದರು