ಕೆಲಸ ಮಾಡ್ತಿರೊ ಇಲ್ಲ ಮನೆಗೆ ಹೋಗ್ತಿರೋ?: ಜಿ.ಪಂ ಸಿಇಓ ಡಾ.ಚನ್ನಪ್ಪ ಪಿಡಿಒಗಳಿಗೆ ಎಚ್ಚರಿಕೆ!

Suddivijaya
Suddivijaya August 17, 2022
Updated 2022/08/17 at 2:09 PM

ಸುದ್ದಿವಿಜಯ, ಜಗಳೂರು: ಸರಕಾರದ ನಿರೀಕ್ಷೆಯಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡ್ತಿಲ್ಲ. ನಿಮಗೆ ಕೆಲಸ ಮಾಡಲು ಇಷ್ಟ ಇಲ್ಲ ಅಂದ್ರೆ ಮನೆಗೆ ಹೋಗಬಹುದು ಎಂದು ಜಿಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಚನ್ನಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಜಿ.ಪಂ ಸಿಇಓ ಸಮ್ಮುಖದಲ್ಲಿ 22 ಗ್ರಾಪಂ ಪಿಡಿಓಗಳ ಮತ್ತು ತಾಂತ್ರಿಕ ಸಿಬ್ಬಂದಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಪಿಡಿಒಗಳು ಕೈಗೆ ಸಿಗ್ತಿಲ್ಲ, ಫೋನ್‍ಗೂ ಸಿಗ್ತಿಲ್ಲ,

ಕಣ್ಣಿಗೆ ಕಾಣಸುತ್ತಿಲ್ಲ ಎಂದು ಸಾರ್ವಜನಿಕರು ನನಗೆ ಫೋನ್ ಕರೆ ಮಾಡುತ್ತಾರೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ನಿರೀಕ್ಷೆಯಂತೆ ಕೆಲಸಗಳಾಗ್ತಿಲ್ಲ. ನೀವು ಜನರ ಮಧ್ಯೆಯಿದ್ದು ಕೆಲಸ ಮಾಡಿ. ಜನರ ಸಂಕಷ್ಟಗಳಿಗೆ ಸ್ಪಂದಿಸಿ. ಆಗ ಜನ ನಿಮ್ಮನ್ನು ಮತ್ತು ನಿಮ್ಮ ಕಾರ್ಯವನ್ನು ಗುರುತಿಸುತ್ತಾರೆ.

ನರೇಗಾದ ಅಡಿ ನಿಗದಿತ ದಿನಗಳಲ್ಲಿ ಇಂತಿಷ್ಟು ಕೆಲಸಗಳು ಪೂರ್ಣಗೊಳ್ಳಬೇಕು. ಕಳೆದ ಬಾರಿ ಟಾರ್ಗೆಟ್‍ದ ಕೆಲಸಗಳು ಪೂರ್ಣಗೊಂಡಿಲ್ಲ. ಮಾನವ ದಿನಗಳನ್ನು ನಿಗದಿತ ದಿನಗಳಲ್ಲಿ ಅರ್ಧದಷ್ಟು ಕೆಲಗಳಾಗಿಲ್ಲ ಎಂದು ಪಲ್ಲಾಗಟ್ಟೆ, ಅಸಗೋಡು, ಬಿದರಕೆರೆ, ತೋರಣಗೆಟ್ಟೆ, ಕೆಚ್ಚೇನಹಳ್ಳಿ, ದೋಣೆಹಳ್ಳಿ, ಹಾಲೇಕಲ್ಲು, ಬಿಳಿಚೋಡು, ಬಿಸ್ತುವಳ್ಳಿ, ಗುತ್ತಿದುರ್ಗ, ಕಲ್ಲೇದೇವರಪುರ, ಬಸವನಕೋಟೆ, ಹನುಮಂತಾಪುರ, ಗುರುಸಿದ್ದಾಪುರ ಸೇರಿ ಒಟ್ಟು 22 ಗ್ರಾಪಂ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.

ಪಿಡಿಓಗಳಾದ ಮರುಳಸಿದ್ದಪ್ಪ, ಶಿವಕುಮಾರ್, ಓಬಯ್ಯ, ಲೋಹಿತ್, ಶಶಿಧರ ಪಟೇಲ್, ವಾಸುದೇವ, ಕೊಟ್ರೇಶ್, ಬಸವರಾಜಪ್ಪ, ಬಸವರಾಜಯ್ಯ ನೀವು ಮನರೇಗಾದಡಿ ಅಂದಾಜು ಟಾರ್ಗೆಟ್ ನೀಡಿದ ಮಾನವದಿನಗಳನ್ನು
4 ತಿಂಗಳು ಕಳೆದರೂ ಪೂರ್ಣಗೊಳಿಸಿಲ್ಲ ಸಾಧನೆ ಶೂನ್ಯ, ತಮ್ಮ ಕೆಲಸ ಅಸಮಧಾನ ತಂದಿದೆ.

ಕಾಮಗಾರಿಗಳ ಪ್ರಗತಿಗೆ ಶ್ರಮಿಸಬೇಕು. ಸುಳ್ಳು ನೆಪಗಳು, ವೈಯಕ್ತಿಕ ಕಾರಣಗಳನ್ನು ಹೇಳುವುದು ನಿಲ್ಲಿಸಿ. ನೀವು ಮಾಡುತ್ತಿರುವ ಕೆಲಸ ನಿಮಗೆ ತೃಪ್ತಿ ತಂದಿದೆಯಾ ಎಂದು ಪ್ರಶ್ನಿಸಿದರು.


ನರೇಗಾ ತಾಂತ್ರಿಕ ಸಂಯೋಜಕ ವೀರೇಂದ್ರ ಪಾಟೀಲ್ ನೀವು ನೀರೀಕ್ಷೆಯಂತೆ ಕೆಲಸ ಮಾಡಿಲ್ಲ. ನೀವು ಹಿಟ್‍ಲೀಸ್ಟ್‍ನಲ್ಲಿದ್ದೀರಿ ಎಂದು ಸಿಇಓ ಡಾ.ಚನ್ನಪ್ಪ ಎಚ್ಚರಿಕೆ ನೀಡಿದರು. ರಾಜ್ಯದಿಂದ ಪ್ರತಿ ಗ್ರಾ.ಪಂ 21800 ಮಾನವದಿನಗಳ ಟಾರ್ಗೆಟ್ ನೀಡಿದ್ದು, ಕೂಲಿಕಾರರಿಗೆ ಕೆಲಸ ಕೊಡ್ತಿಲ್ಲ ಎಂಬ ದೂರುಗಳು ಬರುತ್ತಿವೆ ಸರಕಾರಕ್ಕೆ ನಾನು ಉತ್ತರ ಕೊಡಬೇಕು ಪ್ರಭಾರ ಇಒ ವೈ.ಎನ್.ಚಂದ್ರಶೇಖರ್ ಅವರೇ ನೀವು ಇವರನ್ನು ಸುಮ್ಮನೆ ಕೂರಿಸದೇ ಕೆಲಸ ಮಾಡಿಸಿ. ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಟ್ಟ ಟಾರ್ಗೆಟ್ ರೀಚ್ ಆಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಮನಸ್ಥಿತಿ ಬದಲಾಯಿಸಿಕೊಳ್ಳಿ:
ಪಿಡಿಓಗಳು ಮನಸ್ಥಿತಿ ಬದಲಾಯಿಸಿಕೊಳ್ಳಿ. ಎನ್‍ಆರ್‍ಇಜಿ ಕಾಮಗಾರಿಗಳ ಸಮರ್ಪಕ ಜಾರಿಗೊಳಿಸುವಲ್ಲಿ ಪಿಡಿಓಗಳ ನಿರ್ಲಕ್ಷ್ಯ ಕಾರಣ. ಜಿಡ್ಡುಗಟ್ಟಿದ ವಾತಾವರಣ ತಾಲೂಕಿನಲ್ಲಿ ಸೃಷ್ಟಿಯಾಗಿದೆ. ಯಾರೊಬ್ಬ ವ್ಯಕ್ತಿಯ ಜೊತೆಗೂಡಿ ತಪ್ಪುಹಾದಿ ತುಳಿದು ದುರ್ಬಳಕೆಯಾಗಿದ್ದೀರಾ ಇದು ಬೇಕಾ? ನೆಮ್ಮದಿಯ ಬದುಕು ಅವಶ್ಯಕ ಅಲ್ವೇ? ಒಳ್ಳೆಯ ಕೆಲಸಕ್ಕೆ ನಮ್ಮ ಸಹಕಾರವಿದೆ ಎಂದು ಕಿವಿಮಾತು ಹೇಳಿದರು.

ತಾಂತ್ರಿಕ ಸಿಬ್ಬಂದಿಗೆ ಚಾಟಿ:
ಗ್ರಾಪಂ ತಾಂತ್ರಿಕ ಸಿಬ್ಬಂದಿಗಳು ಕೆಲಸ ಮಾಡದೇ ಕುಂಟು ನೆಪ ಹೇಳ್ತಿದ್ದೀರಿ. ಕನಿಷ್ಠ 10 ಕಾಮಗಾರಿ ಅಂದಾಜು ಕ್ರಿಯಾಯೋಜನೆಯನ್ನು ಪಿಡಿಓ ಗಳು ಪೂರ್ವಯೋಜಿತವಾಗಿ ಅನುಮೋದನೆಗೊಳಿಸಿಕೊಂಡು ತಯಾರಿಸಿಕೊಂಡಿರಬೇಕು. ಒಂದು ಕಾಮಗಾರಿಗೆ 1000 ಜನ ಕೂಲಿಕಾರ್ಮಿಕರಿಗೆ ವಿಳಂಬವಾಗದೆ ಕೆಲಸ ಕೊಡುವಂತಿರಬೇಕು. ಶೇ.99.10 ರಷ್ಟು ಜಾಬ್ ಜಾಬ್ ಕಾರ್ಡ್ ಆಧಾರ್ ಲಿಂಕ್ ಆಗಿದ್ದು. ವೈಯಕ್ತಿಕ ಕಾಮಗಾರಿ ಕೊಡಲು ಏನು ಸಮಸ್ಯೆ ಎಂದು ಎಂಐಎಸ್ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಸಿಇಓ ಚಾಟಿ ಬೀಸಿದರು.

ಜಿ.ಪಂ ಉಪಕಾರ್ಯದರ್ಶಿ ಗಿರೀಶ್ ಮಾತನಾಡಿ, ಜನರು ಆಯುಕ್ತರವರೆಗೆ ಮನರೇಗಾದಡಿ ಕೆಲಸ ಒದಗಿಸಿಲ್ಲ ಎಂಬ ದೂರು ಸಲ್ಲಿಸುತ್ತಾರೆ. ತಾವುಗಳು ಗ್ರಾ.ಪಂ ಗಳಲ್ಲಿ ಜಾಗೃತಿಯಿಂದ ಕೆಲಸಮಾಡಬೇಕು ಕೂಲಿಹಣ ಪಾವತಿಯಾಗುವ ಬಗ್ಗೆ ಮನವರಿಕೆ ಮಾಡಿ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಕಳಿಸಿಕೊಡಿ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಿ.ಪಂ. ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ್, ಪ್ರಭಾರಿ ಇಓ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಟಕೇಶ್ ಮೂರ್ತಿ, ಕೃಷಿ ಅಧಿಕಾರಿ ಮಿಥುನ್ ಕಿಮಾವತ್ ಸೇರಿದಂತೆ ತಾಲೂಕಿನ ಎಲ್ಲ ಗ್ರಾಪಂ ಪಿಡಿಒ ಹಾಗೂ ತಾಂತ್ರಿಕ ಸಿಬ್ಬಂದಿ, ಎಂಜಿಯರ್ಗಳು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!